ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯಿಂದ ಬರುವ ಪ್ರವಾಹದ ನೀರು ಹತ್ತಿರದ ಪ್ರದೇಶಗಳನ್ನು ಮುಳುಗಿಸಿವೆ. ಅಲ್ಲದೇ ಪ್ರವಾಹದ ನೀರು ದೆಹಲಿ ಸಚಿವಾಲಯಕ್ಕೂ ನುಗ್ಗಿದೆ. ದೆಹಲಿಯ ಹಾಗೂ ಯಮುನಾ ನದಿಯ ಜಲಾನಯನ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪರಿಣಾಮವಾಗಿ ಯಮುನಾ ನದಿಯಲ್ಲಿ ನೀರು ಉಕ್ಕಿದೆ ಹಾಗೂ ತಗ್ಗು ಪ್ರದೇಶಗಳಿಗೆ ನುಗ್ಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ನಸುಕಿನ ಜಾವ 2 ಗಂಟೆಯಿಂದ 5ರ ವರೆಗೆ ನೀರಿನ ಮಟ್ಟ 207.47 ಮೀಟರ್‌ನಲ್ಲಿ ಸ್ಥಿರವಾಗಿತ್ತು. ಬೆಳಗ್ಗೆ 6 ರಿಂದ 7ರ ವರೆಗೂ 207.48 ಮೀಟರ್‌ನಲ್ಲಿ ನೀರಿನ ಮಟ್ಟ ಇತ್ತು. ಬಳಿಕ ನೀರಿನ ಪ್ರಮಾಣ ಹೆಚ್ಚಾಗಿದ್ದು, ಯಮುನೆಯ ಆಕ್ರೋಶ ಕಟ್ಟೆಯೊಡೆದಂತಾಗಿದೆ. ದೆಹಲಿ ಮುಖ್ಯಮಂತ್ರಿ ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ ಬಳಿಗೂ ಪ್ರವಾಹ ನೀರು ನುಗ್ಗಿದೆ. ವಾಸುದೇವ್ ಘಾಟ್ ಸುತ್ತಮುತ್ತಲಿನ ಪ್ರದೇಶಗಳು ಸಹ ಜಲಾವೃತಗೊಂಡಿವೆ.
ಕಾಶ್ಮೀರಿ ಗೇಟ್ ಬಳಿಯ ಶ್ರೀ ಮಾರ್ಗಟ್ ವಾಲೆ ಹನುಮಾನ್ ಬಾಬಾ ಮಂದಿರಕ್ಕೂ ಪ್ರವಾಹ ನೀರು ಆವರಿಸಿದೆ. ಕಂದಾಯ ಇಲಾಖೆಯ ಪ್ರಕಾರ, 8,018 ಜನರನ್ನ ಡೇರೆಗಳಿಗೆ ಸ್ಥಳಾಂತರಿಸಲಾಗಿದ್ದು, 2,030 ಜನರನ್ನು 13 ಶಾಶ್ವತ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ 24/7 ನಿಗಾ ಇಡುತ್ತಿದೆ.

Leave a Reply

Your email address will not be published. Required fields are marked *

error: Content is protected !!