ಉದಯವಾಹಿನಿ, ಅಲಿಗಢ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ತನ್ನ ಎರಡು ಅಂತಸ್ತಿನ ಮನೆಯ ಟೆರೇಸ್‌ನಿಂದ ಜಿಗಿದಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಮನಕಲಕುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ. ಟೆರೇಸ್‍ಗೆ ಹತ್ತಿದ ಮಹಿಳೆಯನ್ನು ಜಿಗಿಯುವಂತೆ ಪತಿಯು ಪದೇ ಪದೆ ಕೆಣಕಿದ್ದಾನೆ. ಕೊನೆಗೆ ಆಕೆ ಮೇಲಿನಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ.
ಆರು ವರ್ಷಗಳ ಹಿಂದೆ ಸೋನು ಎಂಬಾತನನ್ನು ಅರ್ಚನಾ ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ಮದುವೆಗೆ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಮಹಿಳೆಯ ಕುಟುಂಬ ತಿಳಿಸಿದೆ. ಆದರೆ ಅರ್ಚನಾ ಅವರ ಅತ್ತೆ-ಮಾವಂದಿರು ವರದಕ್ಷಿಣೆಯಿಂದ ಸಂತುಷ್ಠವಾಗಿರಲಿಲ್ಲ. ಮತ್ತಷ್ಟು ಹಣ ಕೊಡುವಂತೆ ಪೀಡಿಸಿದ್ದಾರೆ. ನಗದಿನ ರೂಪದಲ್ಲಿ 5 ಲಕ್ಷ ರೂಪಾಯಿ ಹಾಗೂ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಕೊಡಿಸುವಂತೆ ಹಿಂಸಿಸಿದ್ದಾರೆ. ವರದಕ್ಷಿಣೆ ಬೇಡಿಕೆ ಈಡೇರದಿದ್ದಾಗ ಅರ್ಚನಾಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದರು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.
