ಉದಯವಾಹಿನಿ, ತಿರುವನಂತಪುರ: ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ವಿ.ಎಸ್. ಸುಜಿತ್ ಎಂಬುವವರಿಗೆ ಪೊಲೀಸ್ ಠಾಣೆಯೊಳಗೆ ಆರಕ್ಷಕರು ಮನಬಂದಂತೆ ಥಳಿಸಿರುವ ಘಟನೆ ಕೇರಳ ರಾಜ್ಯದ ಕುನ್ನಂಕುಲಂ ಠಾಣೆಯಲ್ಲಿ ನಡೆದಿದೆ. 2023ರಲ್ಲಿ ನಡೆದ ಘಟನೆ ಇದಾಗಿದ್ದು, ಇತ್ತೀಚೆಗೆ ಇದರ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಇದರ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ (ಕೆಎಸ್‌ಎಚ್‌ಆರ್‌ಸಿ) ತನಿಖೆ ಆರಂಭಿಸಿದೆ.
ಠಾಣೆಗೆ ಕರೆಸಿ ವ್ಯಕ್ತಿಗೆ ಮನಬಂದಂತೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಯೋಗವು ತ್ರಿಶೂರ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ. ದೀರ್ಘ ಕಾನೂನು ಹೋರಾಟದ ನಂತರ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸುಜಿತ್ ಅವರು ಈ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ. ಸುಜಿತ್ ಅವರ ಪ್ರಕಾರ, ಚೋವನ್ನೂರಿನಲ್ಲಿ ತನ್ನ ಸ್ನೇಹಿತರಿಗೆ ಬೆದರಿಕೆ ಹಾಕಿದ್ದ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಅವರನ್ನು ಏಪ್ರಿಲ್ 5, 2023 ರಂದು ವಶಕ್ಕೆ ತೆಗೆದುಕೊಳ್ಳಲಾಯಿತು. ಸ್ಟೇಷನ್ ಲಾಕ್-ಅಪ್ ಒಳಗೆ ಐದು ಅಧಿಕಾರಿಗಳು ತಮ್ಮನ್ನು ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
