ಉದಯವಾಹಿನಿ, ನಾವಿಂದು ವ್ಯಾಪಕವಾಗಿ ಬಳಸುತ್ತಿರುವ ಸ್ಮಾರ್ಟ್ ಫೋನ್‌ಗಳು, ಡಿಜಿಟಲ್ ಸಾಧನಗಳು, ವಾಹನಗಳು, ಎಲೆಕ್ಟ್ರಿಕ್ ಉಪಕರಣಗಳು, ಯುದ್ಧದ ಶಸ್ತ್ರಾಸ್ತ್ರ.. ಹೀಗೆ ಮೊದಲಾದವುಗಳಿಗೆ ಅತಿ ಮುಖ್ಯವಾದ ಅಂಗವೆಂದರೆ ಅದು ಸೆಮಿಕಂಡಕ್ಟರ್ ಚಿಪ್‌ಗಳು. ಕಚ್ಚಾ ತೈಲ ಕಪ್ಪು ಚಿನ್ನ ಎನಿಸಿಕೊಂಡರೆ, ಚಿಪ್‌ಗಳು ಡಿಜಿಟಲ್ ವಲಯದ ವಜ್ರ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದಷ್ಟೇ ಪ್ರಾಮುಖ್ಯತೆಯನ್ನು ಇದು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಲು ಇದು ಕೂಡ ಪ್ರಮುಖ ಅಸ್ತ್ರವಾಗಿದೆ. ಚಿಪ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕೆಂಬ ಭಾರತದ ಕನಸು ನನಸಾಗಿದೆ. ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮೇಡ್ ಇನ್ ಇಂಡಿಯಾ ಚಿಪ್ ತಯಾರಾಗಿದೆ. ಡಿಜಿಟಲ್ ವಲಯದಲ್ಲಿ ‘ವಿಕ್ರಮ’ ಸಾಧಿಸಲು ಭಾರತ ಮುಂದಡಿಯಿಟ್ಟಿದೆ.
ಹೌದು, ಭಾರತ ದೇಶೀಯವಾಗಿ ‘ವಿಕ್ರಮ್ 32 ಮೈಕ್ರೋಪ್ರೊಸೆಸರ್’ (Vikram-32 Chip) ಅನ್ನು ಉತ್ಪಾದಿಸಿದೆ. ಇದನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಧಾನಿ ಮೋದಿ ಅವರಿಗೆ ಈಚೆಗೆ ಹಸ್ತಾಂತರಿಸಿದ್ದಾರೆ.
