ಉದಯವಾಹಿನಿ, ಇಸ್ಲಾಮಬಾದ್: ಭಾರತವು ರಾಜ ತಾಂತ್ರಿಕ ಮಾರ್ಗಗಳ ಮೂಲಕ ಇತ್ತೀಚಿನ ಪ್ರವಾಹದ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನ ಜೊತೆಗೆ ಹಂಚಿಕೊಂಡಿದೆ. ಆದರೆ ಇದು ಹಿಂದೆ ಇದ್ದಷ್ಟು ವಿವರವಾಗಿಲ್ಲ ಎಂದು ಆ ರಾಷ್ಟ್ರ ದೂರಿದೆ. ಇಸ್ಲಾಮಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಚೇರಿಯ ವಕ್ತಾರ ಶಫ್ಕತ್ ಅಲಿ ಖಾನ್, ಸಿಂಧೂ ಜಲ ಒಪ್ಪಂದಕ್ಕೆ (IWT)ಭಾರತ ಸಂಪೂರ್ಣವಾಗಿ ಬದ್ಧವಾಗಿರಬೇಕು ಎಂದು ಒತ್ತಾಯಿಸಿದರು. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತ 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು.

ಸಿಂಧೂ ಜಲ ಆಯುಕ್ತರಿಂದ ಮಾಹಿತಿ ಇಲ್ಲ: ಭಾರತ ರಾಜತಾಂತ್ರಿಕ ಮಾರ್ಗಗಳ ಮೂಲಕ ವಿವಿಧ ನದಿಗಳಲ್ಲಿನ ಪ್ರವಾಹದ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ, ಇದು ಹಿಂದೆ ಇದ್ದಷ್ಟು ವಿವರವಾಗಿಲ್ಲ. ಸಿಂಧೂ ಜಲ ಆಯುಕ್ತರನ್ನು ಮಾಹಿತಿ ಹಂಚಿಕೊಳ್ಳಲು ಬಳಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ಸಿಂಧೂ ಜಲ ಒಪ್ಪಂದದ ಎಲ್ಲಾ ನಿಬಂಧನೆಗಳನ್ನು ಭಾರತವು ಸಂಪೂರ್ಣವಾಗಿ ಅನುಸರಿಸಬೇಕು ಎಂದು ನಾವು ಪುನರುಚ್ಚರಿಸುತ್ತೇವೆ ಎಂದು ಖಾನ್ ಹೇಳಿದರು.

ಭಾರತದ ಪ್ರತಿಕ್ರಿಯೆ: ಮಾನವೀಯ ನೆಲೆಯಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದೊಂದಿಗೆ ಪ್ರವಾಹದ ಡೇಟಾವನ್ನು ಹಂಚಿಕೊಳ್ಳುತ್ತಿದೆ ಎಂದು ಭಾರತ ಹೇಳಿದೆ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ ಭಾರತ ಪ್ರವಾಹದ ಮಾಹಿತಿ ಹಂಚಿಕೊಳ್ಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಸಂಭವಿಸುತ್ತಿರುವ ಮಳೆ ಸ್ಥಿತಿಯನ್ನು ನೋಡಿದ್ದೇವೆ. ಮಾನವೀಯ ಅಂಶಗಳ ಆಧಾರದ ಮೇಲೆ ಪ್ರವಾಹದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಜೈಸ್ವಾಲ್ ತಮ್ಮ ವಾರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!