ಉದಯವಾಹಿನಿ,ಬೆಂಗಳೂರು: ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಶಾಸಕರ ತರಬೇತಿ ಶಿಬಿರಕ್ಕೆ ಆಹ್ವಾನಿಸಲಾಗಿದ್ದ ಸಂಪನ್ಮೂಲ ವ್ಯಕ್ತಿಗಳ ಹೆಸರಗಳ ಪಟ್ಟಿಯಿಂದ ವಿವಾದಿತ ವ್ಯಕ್ತಿಗಳ ಹೆಸರುಗಳನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಹಮ್ಮಿಕೊಂಡಿರುವ ಮೂರು ದಿನಗಳ ತರಬೇತಿ ಶಿಬಿರದಲ್ಲಿ ಸ್ಫೂರ್ತಿದಾಯಕ ಭಾಷಣದ ವ್ಯಕ್ತಿಗಳ ಆಯ್ಕೆ ಕುರಿತು ಸ್ಪೀಕರ್ ಯು.ಟಿ.ಖಾದರ್ ಅವರ ನಡೆಗೆ ತೀವ್ರ ಟೀಕೆ ಕೇಳಿಬಂದ ಹಿನ್ನೆಲೆ ವಿವಾದಿತ ಸಂಪನ್ಮೂಲ ವ್ಯಕ್ತಿಗಳ ಹೆಸರನ್ನು ಕೈಬಿಡಲಾಗಿದೆ. ನೆಲಮಂಗಲ ಬಳಿಯಿರುವ ಧರ್ಮಸ್ಥಳದ ನ್ಯಾಚುರೋಪತಿ ಕೇಂದ್ರದಲ್ಲಿ ಜೂನ್ ೨೬ರಿಂದ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ದೀದಿ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದರು.
