ಉದಯವಾಹಿನಿ,ಬೆಂಗಳೂರು: ವಾಟಾಳ್ ನಾಗರಾಜ್ ವಿಧಾನಸೌಧ ಪ್ರವೇಶಿಸಿ ಹತ್ತಿರ ಎರಡು ದಶಕ ಆಗುತ್ತಿದ್ದರೂ ಅವರ ಬದ್ಧತೆ ಬಗ್ಗೆ ಹಿರಿಯ ರಾಜಕಾರಣಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಟಾಳ್ ನಾಗರಾಜ್ ಅವರ ಬದ್ಧತೆಯನ್ನು ಗುಣಗಾನ ಮಾಡಿದರು. ಅವರು ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಶಾಂತವೇರಿ ಗೋಪಾಲಗೌಡರನ್ನು ಇವತ್ತಿಗೂ ಇಡೀ ನಾಡು ಯಾಕೆ ಸ್ಮರಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಅಧಿವೇಶನದಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು, ಆದಷ್ಟು ಗೈರಾಗುವುದನ್ನು ಕಡಿಮೆ ಮಾಡಿ ಸದನದ ಕಲಾಪಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು. ಪ್ರತಿಯೊಬ್ಬ ಶಾಸಕರು ಸದನಕ್ಕೆ ತಪ್ಪದೇ ಹಾಜರಾಗುವ ಮೂಲಕ ಮತ್ತೊಬ್ಬರಿಗೆ ಸ್ಪೂರ್ತಿಯಾಗಬೇಕು, ಅಧಿವೇಶನದಲ್ಲಿ ಪಾಲ್ಗೊಂಡು ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರದಿಂದ ಪರಿಹಾರ ಕಂಡುಕೊಳ್ಳಬೇಕು ಎಂದರು.
