ಉದಯವಾಹಿನಿ, ಬೆಂಗಳೂರು: ಕಂಠಪೂರ್ತಿ ಕುಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದವನ ವಿರುದ್ಧ ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡುತ್ತಿದ್ದಂತೆ ಆರೋಪಿ ನೇಣಿಗೆ ಶರಣಾಗಿರುವ ಘಟನೆ ನಗರದ ಮೈಸೂರು ರಸ್ತೆಯ ಕಸ್ತೂರಿ ಬಾ ನಗರದಲ್ಲಿ ನಡೆದಿದೆ.
ಮೃತ ಆರೋಪಿಯನ್ನು ದಿವ್ಯ ತೇಜ್ ಹಾಗೂ ಹಲ್ಲೆಗೊಳಗಾದ ವ್ಯಕ್ತಿಯನ್ನು ರಿಷಿ ತೇಜ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ದಿನ ರಿಷಿ ಕಡೆಯಿಂದ ದಿವ್ಯ ಬಿಯರ್ ಬಾಟಲಿಗಳನ್ನು ತರಿಸಿದ್ದ. ಬಳಿಕ ತಡರಾತ್ರಿವರೆಗೆ ಇಬ್ಬರು ಸೇರಿಕೊಂಡು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಕುಡಿದ ನಶೆಯಲ್ಲಿದ್ದ ದಿವ್ಯ ಏಕಾಏಕಿ ಬಿಯರ್ ಬಾಟಲಿಯಿಂದ ರಿಷಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಷಿಗೆ ದಿವ್ಯ ಹೊಸ ಬಟ್ಟೆ ತಂದುಕೊಟ್ಟಿದ್ದ. ಬಳಿಕ ರಿಷಿ ಹೊಸ ಬಟ್ಟೆ ಧರಿಸಿಕೊಂಡು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ.
ದೂರು ದಾಖಲಾಗುತ್ತಿದ್ದಂತೆ ಹೆದರಿಕೊಂಡ ದಿವ್ಯ ಹಲ್ಲೆ ನಡೆದ ಮನೆಗೆ ಮರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಿಷಿ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಮನೆ ಪರಿಶೀಲನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
