ಉದಯವಾಹಿನಿ, ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್ ಕುಮಾರ್ (Shiva Rajkumar) ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಶಿವಣ್ಣ ಹೆಚ್ಚು ಆತ್ಮೀಯರಾಗುತ್ತಾರೆ. 60 ವರ್ಷ ದಾಟಿದರೂ ಈಗಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರುವ ಶಿವರಾಜ್ ಕುಮಾರ್ ಈಗಿನ ಯುವ ನಟರಿಗೆ ಮಾದರಿಯಾಗಿದ್ದಾರೆ. ಸದ್ಯ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದ ಬಳಿಕ ವಿಶ್ರಾಂತಿ ಪಡೆದು ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗಷ್ಟೆ ಸಿನಿಮಾ ಸೆಟ್‌ನಲ್ಲಿ ಅಭಿಮಾನಿಗಳ ವರ್ತನೆಗೆ ಗರಂ ಆಗಿದ್ದಾರೆ. ಎಲ್ಲ ಸಂದರ್ಭದಲ್ಲೂ ಅಭಿಮಾನಿಗಳ ಜೊತೆ ಬಹಳಷ್ಟು ತಾಳ್ಮೆಯಿಂದ ಮಾತನಾಡಿಸುತ್ತಿದ್ದ ಶಿವಣ್ಣ ಈ ಭಾರಿ ಶೂಟಿಂಗ್ ಸೆಟ್‌ನಲ್ಲಿ ಫ್ಯಾನ್ಸ್ ಮೇಲೆ ಕೆಂಡಾಮಂಡಲವಾಗಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದೆ.
ಹ್ಯಾಟ್ರಿಕ್ ಹೀರೋ ಎಂಬ ಬಿರುದಿನಿಂದ ಕರೆಸಿಕೊಳ್ಳುವ ನಟ ಶಿವರಾಜ್ ಕುಮಾರ್ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶಿವಣ್ಣ ಬ್ಯಾಕ್ ಟು ಬ್ಯಾಕ್ ಸಾಕಷ್ಟು ಹಿಟ್ ಚಿತ್ರ ಕೊಟ್ಟು ಅಭಿಮಾನಿಗಳನ್ನು ಮನರಂಜಿಸಿದ್ದಾರೆ. ಈಗಲೂ ಶಿವರಾಜ್ ಕುಮಾರ್ ನಟನೆ, ಡ್ಯಾನ್ಸ್ ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಇನ್ನೂ ಶಿವಣ್ಣನನ್ನು ಕಂಡಾಗ ಅಭಿಮಾನಿಗಳು ಮುಗಿ ಬೀಳುವುದೇ ಹೆಚ್ಚು. ಆದರೆ ಈ ಭಾರಿ ಸಿನಿಮಾ ಸೆಟ್‌ನಲ್ಲಿ ಫ್ಯಾನ್ಸ್ ಅತಿರೇಕದ ವರ್ತನೆಗೆ ಶಿವಣ್ಣ ಗರಂ ಆಗಿದ್ದಾರೆ.
