ಉದಯವಾಹಿನಿ, 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಅಂತ್ಯಗೊಂಡಿದ್ದು, ಜಪಾನ್ ದೇಶದದ ʻಲಾಸ್ಟ್ ಲ್ಯಾಂಡ್ʼ ಮರಾಠಿಯ ʻಸಬರ್ ಬೊಂದಾʼ ಮತ್ತು ʻವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಅತ್ಯುತ್ತಮ ಪ್ರಶಸ್ತಿ ವಿಜೇತರಿಗೆ ಪಾರಿತೋಷಕದ ಜೊತೆಗೆ 10 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದವರಿಗೆ ತಲಾ ಐದು ಲಕ್ಷ ರೂ. ಮತ್ತು ಎರಡು ಲಕ್ಷ ರೂ. ನೀಡಿ ಗೌರವಿಸಲಾಯಿತು.
ಏಷ್ಯನ್ ಚಿತ್ರ ವಿಭಾಗದಲ್ಲಿ ಈ ವರ್ಷ ಒಟ್ಟು 15 ಚಿತ್ರಗಳು ಪ್ರಶಸ್ತಿ ಕಣದಲ್ಲಿದ್ದವು. ಈ ಪೈಕಿ ಜಪಾನ್‌ನ ʻದಿ ಲಾಸ್ಟ್ ಲ್ಯಾಂಡ್ʼ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾದರೆ, ಭಾರತದ ʻಶೇಪ್ ಆಫ್ ಮೋಮೋʼ ಮತ್ತು ಜಪಾನ್‌ನ ʼದಿ ಡೀಪೆಸ್ಟ್ ಸ್ಪೇಸ್ ಇನ್ ಯೂಎಸ್ʼ ಚಿತ್ರಗಳು ದ್ವಿತೀಯ ಮತ್ತು ತೃತೀಯ ಚಿತ್ರ ಪ್ರಶಸ್ತಿಗೆ ಭಾಜನವಾಗಿವೆ. ಫಿಲಿಪೈನ್ಸ್‌ನ ʻರಿಪಬ್ಲಿಕ್ ಆಫ್ ಪಿಪೊಲಿಪಿನಾಸ್ʼ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.
ಭಾರತೀಯ (ಚಿತ್ರಭಾರತಿ) ವಿಭಾಗದಲ್ಲಿ ಮರಾಠಿ ಚಿತ್ರ ʻಸಬರ್ ಬೊಂಡಾʼ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಮಲಯಾಳಂನ ʻಮೋಹಂʼ ಮತ್ತು ʻಕಾಡುʼ ಚಿತ್ರಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಚಿತ್ರ ಪ್ರಶಸ್ತಿಗಳನ್ನು ಗೆದ್ದಿವೆ. ಮರಾಠಿ ಭಾಷೆಯ ʻಗೊಂದಾಳ್ʼ ಚಿತ್ರವು ಫಿಪ್ರೆಸ್ಕಿ ಪ್ರಶಸ್ತಿ ಪಡೆದರೆ, ಮಲಯಾಳಂ ಭಾಷೆಯ ʻಸರ್ಕೀಟ್ʼ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.
