ಉದಯವಾಹಿನಿ, ನವದೆಹಲಿ: ವಿಜಯ್ ಮಲ್ಯ ನೀರವ್ ಮೋದಿ (Nirav Modi) ಸೇರಿದಂತೆ ದೇಶದಿಂದ ಪರಾರಿಯಾಗಿರುವ ಉನ್ನತ ಮಟ್ಟದ ಕೈದಿಗಳನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ತಂಡವು ಇತ್ತೀಚೆಗೆ ದೆಹಲಿಯ (Delhi) ತಿಹಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಪಿಎಸ್ (CPS)ನಿಯೋಗವು ಮೊದಲ ಬಾರಿಗೆ ಅಪರಾಧಿಗಳು ಮತ್ತು ಹೆಚ್ಚಿನ ಭದ್ರತೆಯ ಕೈದಿಗಳನ್ನು ಇರಿಸಿರುವ ಜೈಲು ಸಂಖ್ಯೆ 4 ಅನ್ನು ಪರಿಶೀಲಿಸಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಬಾರಿಗೆ ಸಿಪಿಎಸ್ ನಿಯೋಗವು ಅಪರಾಧಿಗಳು ಮತ್ತು ಹೆಚ್ಚಿನ ಭದ್ರತೆಯ ಕೈದಿಗಳನ್ನು ಇರಿಸಿರುವ ಜೈಲು ಸಂಖ್ಯೆ 4 ಅನ್ನು ಪರಿಶೀಲಿಸಿತ್ತು. ತಂಡವು ಕೈದಿಗಳೊಂದಿಗೆ ಮಾತನಾಡಿ, ಜೈಲಿನ ಮೂಲಸೌಕರ್ಯ ಮತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಕೈದಿಗಳ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿ ಈ ಹಿಂದೆ ಬ್ರಿಟಿಷ್ ನ್ಯಾಯಾಲಯಗಳು ಭಾರತೀಯ ಜೈಲುಗಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಸಿಪಿಎಸ್ ನಿಯೋಗವು ಭಾರತಕ್ಕೆ ಭೇಟಿ ನೀಡಿದೆ.
ದೇಶಕ್ಕೆ ಹಸ್ತಾಂತರಿಸಲಾಗುವ ಎಲ್ಲ ವ್ಯಕ್ತಿಗಳನ್ನು ಸುರಕ್ಷಿತ ಮತ್ತು ಕಾನೂನುಬದ್ಧವಾಗಿ ಇರಿಸುವುದಾಗಿ ಭಾರತ ಸರ್ಕಾರವು ಯುಕೆ ಅಧಿಕಾರಿಗಳಿಗೆ ಭರವಸೆ ನೀಡಿದೆ. ಯಾವುದೇ ಆರೋಪಿಗಳನ್ನು ಕಸ್ಟಡಿ ವೇಳೆ ಅಕ್ರಮ ವಿಚಾರಣೆಗೆ ಒಳಪಡಿಸದಂತೆ ನೋಡಿಕೊಳ್ಳುವುದಾಗಿಯೂ ತಂಡಕ್ಕೆ ಭರವಸೆ ನೀಡಲಾಗಿದೆ. ಅಗತ್ಯವಿದ್ದರೆ ಜೈಲಿನೊಳಗೆ ಪ್ರತ್ಯೇಕ ಹೈ-ಸೆಕ್ಯುರಿಟಿ ಎನ್ಕ್ಲೇವ್ ಅನ್ನು ಸ್ಥಾಪಿಸಲಾಗುತ್ತದೆ. ಇದು ಉನ್ನತ ಅಥವಾ ಸೂಕ್ಷ್ಮ ಕೈದಿಗಳನ್ನು ಸಾಮಾನ್ಯ ಜೈಲು ಜನಸಂಖ್ಯೆಯಿಂದ ಪ್ರತ್ಯೇಕವಾಗಿ ಇರಿಸುತ್ತದೆ ಎಂದು ಸಿಪಿಎಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ.
2024ರ ವೇಳೆಗೆ 178 ಮಂದಿಗಳ ಹಸ್ತಾಂತರಕ್ಕೆ ಭಾರತ ವಿನಂತಿಯನ್ನು ಮಾಡಿದೆ. ಇದರಲ್ಲಿ ಯುಕೆಯಲ್ಲಿ ನೆಲೆಸಿರುವ ದೇಶದಿಂದ ಪರಾರಿಯಾಗಿರುವ ಸುಮಾರು 20 ಪ್ರಕರಣಗಳಿವೆ. ಇವುಗಳಲ್ಲಿ ಹಣಕಾಸಿನ ವಂಚನೆ, ಶಸ್ತ್ರಾಸ್ತ್ರ ವ್ಯವಹಾರ ಮತ್ತು ಖಲಿಸ್ತಾನಿ ಜಾಲಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಗಳು ಸೇರಿದ್ದಾರೆ.
