ಉದಯವಾಹಿನಿ , ಬೆಂಗಳೂರು: ಮದ್ದೂರಿನಲ್ಲಿ ಕಲ್ಲು ಎಸೆದವರು, ದೊಣ್ಣೆಯಿಂದ ಹೊಡೆದಿರುವವರು, ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎನ್ನುವವರು ಎಲ್ಲರನ್ನೂ ಸರ್ಕಾರ ಬಂಧಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಡಿಜೆ ಹಾಕಿಕೊಂಡು ಹೋಗುತ್ತಿದ್ದರು, ಅದನ್ನು ನಿಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದರು. ಗಣಪತಿ ಮೆರವಣಿಗೆಯನ್ನು ಮಾಡಬಾರದು ಎಂದು ಅಲ್ಲಿನ ಕೆಲವು ಅಲ್ಪಸಂಖ್ಯಾತ ಗೂಂಡಾಗಳು ಮೆರವಣಿಗೆಯ ಮೇಲೆ ಸುಮಾರು 5 ಕೆಜಿ ಗಾತ್ರದ ಕಲ್ಲುಗಳನ್ನು ಎಸೆದಿರುವುದು ಮಾಧ್ಯಮಗಳಲ್ಲಿ ಬರುತ್ತಿದೆ. ಮೊದಲೇ ಅವರು ಪೂರ್ವಯೋಜನೆ ಮಾಡಿಕೊಂಡು ಕಲ್ಲುಗಳನ್ನು ಮತ್ತು ದೊಣ್ಣೆಗಳನ್ನು ಮಹಡಿಯ ಮೇಲೆ ಇಟ್ಟುಕೊಂಡು ಮೆರವಣಿಗೆಯ ಮೇಲೆ ಆಕ್ರಮಣ ಮಾಡುವುದು ಎಲ್ಲವೂ ಮಾಧ್ಯಮಗಳ ಮೂಲಕ ಗೊತ್ತಾಗುತ್ತಿದೆ ಎಂದು ವಿವರಿಸಿದರು.
ನಮ್ಮ ರಾಜ್ಯದಲ್ಲಿ ಗಣಪತಿ ಮೆರವಣಿಗೆ ಮಾಡಲು ವಿರೋಧವಿದೆ. ಕೆಲವು ಮುಸಲ್ಮಾನ ಗೂಂಡಾಗಳು ಗಣಪತಿಯ ಮೆರವಣಿಗೆ ಮೇಲೆ ಕಲ್ಲನ್ನು ಎಸೆದಿದ್ದಾರೆ. ಆ ಗೂಂಡಾಗಳು ಯಾರು? ಮದ್ದೂರಿನ ಕೆಮ್ಮಣ್ಣ ಕಾಲುವೆ ಸರ್ಕಲ್‌ನಲ್ಲಿ ಪೊಲೀಸ್ ಲಾಠಿಚಾರ್ಜ್ ಮಾಡಿದ್ದಾರೆ. ಕಲ್ಲು ಎಸೆದ 21 ಜನರನ್ನು ಬಂಧಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇನ್ನೂ ಅನೇಕ ವ್ಯಕ್ತಿಗಳು ಈ ಕೃತ್ಯದಲ್ಲಿ ಇದ್ದಾರೆ ಎಂದು ಆರೋಪಿಸಿದರು.
