ಉದಯವಾಹಿನಿ, ನವದೆಹಲಿ: ಏಳು ವರ್ಷಗಳ ಶಿಕ್ಷೆಯನ್ನು ಪೂರೈಸಿದ ಕೈದಿಯನ್ನು ಬಿಡುಗಡೆ ಮಾಡದೆ, 4.7 ವರ್ಷಗಳ ಕಾಲ ಹೆಚ್ಚು ಸಮಯ ಜೈಲಿನಲ್ಲಿಟ್ಟಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಧ್ಯ ಪ್ರದೇಶ (Madhya Pradesh) ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕೈದಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
2004ರಲ್ಲಿ ಮಧ್ಯಪ್ರದೇಶದ ಸೆಷನ್ಸ್ ಕೋರ್ಟ್ ಕೈದಿಯನ್ನು ಭಾರತೀಯ ದಂಡ ಸಂಹಿತೆಯ (IPC) ಕಲಂ 376(1), 450, ಮತ್ತು 560B ಅಡಿಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. 2007ರಲ್ಲಿ ಮಧ್ಯ ಪ್ರದೇಶ ಹೈಕೋರ್ಟ್ ಶಿಕ್ಷೆಯನ್ನು ಏಳು ವರ್ಷಗಳಿಗೆ ಇಳಿಸಿತು. ಆದರೆ 2014ರಲ್ಲಿ ಶಿಕ್ಷೆಯ ಅವಧಿ ಮುಗಿದರೂ ಕೈದಿಯನ್ನು 2023ರ ಜೂನ್‌ವರೆಗೆ ಬಿಡುಗಡೆ ಮಾಡಲಿಲ್ಲ. ಇದರಿಂದ ಆತ 4.7 ವರ್ಷಗಳ ಕಾಲ ಅನಗತ್ಯವಾಗಿ ಜೈಲಿನಲ್ಲಿದ್ದ. ಈ ಅನ್ಯಾಯದ ವಿರುದ್ಧ ಕೈದಿಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ದ್ವಿಸದಸ್ಯ ಪೀಠ, ರಾಜ್ಯದ ಲೋಪದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು. ಮಧ್ಯ ಪ್ರದೇಶದ ವಕೀಲರು ಸಲ್ಲಿಸಿದ “ತಪ್ಪು ದಾರಿಗೆಳೆಯುವ” ಪ್ರಮಾಣಪತ್ರಗಳನ್ನು ಕೋರ್ಟ್ ಟೀಕಿಸಿತು. ಇದು ಕೈದಿಯ ಬಿಡುಗಡೆಯ ಕಾಲಮಿತಿಯ ಬಗ್ಗೆ ತಪ್ಪು ಮಾಹಿತಿ ನೀಡಿತ್ತು. ಆರಂಭದಲ್ಲಿ ಕೈದಿಯು ಎಂಟು ವರ್ಷಗಳ ಕಾಲ ತಪ್ಪಾಗಿ ಜೈಲಿನಲ್ಲಿದ್ದ ಎಂದು ತಿಳಿದುಬಂದಿತಾದರೂ, ನಂತರದ ಸ್ಪಷ್ಟೀಕರಣದಿಂದ ಇದು 4.7 ವರ್ಷಗಳು ಎಂದು ದೃಢಪಟ್ಟಿತು. ಮಧ್ಯ ಪ್ರದೇಶ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲ ನಚಿಕೇತ ಜೋಶಿ, ಅಪರಾಧಿ ಸ್ವಲ್ಪ ಸಮಯದಿಂದ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ತಿಳಿಸಿದರು. ರಾಜ್ಯದ ಈ ಲೋಪವನ್ನು “ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ” ಎಂದು ಕರೆದ ಕೋರ್ಟ್, ಕೈದಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತು.

Leave a Reply

Your email address will not be published. Required fields are marked *

error: Content is protected !!