ಉದಯವಾಹಿನಿ, ಲಖನೌ: ಹೆತ್ತ ತಾಯಿಯೊಬ್ಬಳು 15 ದಿನಗಳ ನವಜಾತ ಶಿಶುವನ್ನು ಫ್ರೀಜರ್‌ನಲ್ಲಿ ಇರಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ಮಗು ನಿದ್ರೆಗೆ ಜಾರಿದಾಗ ತಾಯಿ ಮಗುವನ್ನು ತೆಗೆದುಕೊಂಡು ಹೋಗಿ ಫ್ರೀಜರ್‌ನಲ್ಲಿ ಇರಿಸಿದ್ದಾಳೆ. ಶೀತ ತಾಪಮಾನದಿಂದಾಗಿ ಮಗು ಅಳಲು ಪ್ರಾರಂಭಿಸಿದ್ದು, ಕೂಡಲೇ ಕುಟುಂಬ ಸದಸ್ಯರು ಮಗುವಿನ್ನು ರಕ್ಷಿಸಿದರು. ಸಕಾಲಿಕವಾಗಿ ಮಗುವನ್ನು ಫ್ರೀಜರ್‌ನಿಂದ ಹೊರತೆಗೆದುದರಿಂದ ಮಗುವಿನ ಜೀವವನ್ನು ಉಳಿಯಿತು.
ಮಗುವಿನ ಜೋರಾಗಿ ಅತ್ತಿದ್ದರಿಂದ ಕುಟುಂಬ ಸದಸ್ಯರು ನವಜಾತ ಶಿಶು ಫ್ರೀಜರ್‌ನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣ ಅವರು ಮಗುವನ್ನು ರಕ್ಷಿಸಿ, ವೈದ್ಯರನ್ನು ಸಂಪರ್ಕಿಸಿದರು. ಮಗು ಸುರಕ್ಷಿತವಾಗಿದೆ. ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ದೃಢಪಡಿಸಿದರು.
ಏನು ಕಾರಣ?: ಈ ಕುರಿತು ತನಿಖೆ ನಡೆಸಿರುವ ವೈದ್ಯಕೀಯ ಪರೀಕ್ಷೆಯಿಂದ ಮಹಿಳೆಯು ಪ್ರಸವಾನಂತರದ ಮನೋರೋಗದಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದೆ. ಇದು ಅಪರೂಪದ ಮನೋರೋಗ ಮತ್ತು ಅತ್ಯಂತ ಗಂಭೀರ ಆರೋಗ್ಯ ಸ್ಥಿತಿ.
ಹೆರಿಗೆಯ ಅನಂತರ ಹಾರ್ಮೋನುಗಳ ಬದಲಾವಣೆ ಮತ್ತು ಮಾನಸಿಕ ಒತ್ತಡದಿಂದ ಮಹಿಳೆಯರಲ್ಲಿ ವಿಚಿತ್ರ ನಡವಳಿಕೆ ಕಂಡು ಬರುತ್ತದೆ. ಇದರಿಂದ ಕೆಲವು ಮಹಿಳೆಯರು ಮಗುವಿಗೆ ಅಥವಾ ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತಾರೆ. ಈ ಅನಾರೋಗ್ಯವನ್ನು ನಿರ್ವಹಿಸಲು ಆರಂಭಿಕ ಗುರುತಿಸುವಿಕೆ ಮತ್ತು ಚಿಕಿತ್ಸೆ ಅಗತ್ಯ ಎನಿಸಿಕೊಂಡಿದೆ.ಈ ಘಟನೆಯ ಅನಂತರ ಕುಟುಂಬವು ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದೆ. ಆಕೆಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ.
