ಉದಯವಾಹಿನಿ, ಕೋಲ್ಕತಾ: ʼದಿ ಬೆಂಗಾಳ್ ಫೈಲ್ಸ್ʼ (The Bengal Files) ಚಿತ್ರದ ಸೆನ್ಸಾರ್ ಶಿಪ್ ಅರ್ಜಿಯನ್ನು (Censorship Request) ಕೋಲ್ಕತಾ ಹೈಕೋರ್ಟ್ (Calcutta High Court) ವಜಾಗೊಳಿಸಿದ್ದು, ಇದರಿಂದ ಚಿತ್ರ ನಿರ್ಮಾಪಕರಿಗೆ ಕೊಂಚ ನಿರಾಳವಾದಂತಾಗಿದೆ. 1946ರ ಆಗಸ್ಟ್‌ನಲ್ಲಿ ಕೋಲ್ಕತಾದಲ್ಲಿ ನಡೆದ ಗ್ರೇಟ್ ಕಲ್ಕತ್ತಾ ಕಿಲ್ಲಿಂಗ್ಸ್ (The Great Calcutta Killings) ಎಂದು ಕರೆಯಲ್ಪಡುವ ಕೋಮು ಗಲಭೆಯನ್ನು ಆಧರಿಸಿರುವ ಚಿತ್ರ ‘ದಿ ಬೆಂಗಾಳ್ ಫೈಲ್ಸ್’ (The Bengal Files) ಕಳೆದ ಶುಕ್ರವಾರ (ಸೆ. 5) ಬಿಡುಗಡೆಯಾಗಿತ್ತು. ಇದಕ್ಕೆ ಸಂಬಂಧಿಸಿ ಸಲ್ಲಿಸಲಾಗಿದ್ದ ಸೆನ್ಸಾರ್ ಶಿಪ್ ಅರ್ಜಿಯನ್ನು ಇದೀಗ ಕೋಲ್ಕತಾ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ತಮ್ಮ ಅಜ್ಜ ಗೋಪಾಲ್ ಚಂದ್ರ ಮುಖರ್ಜಿ ಅವರನ್ನು ಮಾನಹಾನಿಕರ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರ ಶಂತನು ಮುಖರ್ಜಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸೆನ್ಸಾರ್ ಪ್ರಮಾಣೀಕರಣದ ಬಗ್ಗೆ ತನಿಖೆ ನಡೆಸಬೇಕು. ಚಲನಚಿತ್ರವನ್ನು ಪ್ರಮಾಣೀಕರಿಸುವ ಮೊದಲು ಸೆನ್ಸಾರ್ ಮಂಡಳಿಯು ಯಾವ ನಿಯತಾಂಕಗಳನ್ನು ತೆಗೆದುಕೊಂಡಿದೆ ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಅವರು ನ್ಯಾಯಾಲಯಕ್ಕೆ ಕೋರಿದ್ದರು. ಆದರೆ ಇದೀಗ ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
