ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ನಮಗೆ ಎಷ್ಟು ಪೂರಕವಾಗಿದೆಯೋ ಅಷ್ಟೇ ಮಾರಕವಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಸೆಲೆಬ್ರಿಟಿಗಳಿಗೆ ತಲೆನೋವಾಗಿ ಕಾಡುತ್ತಿದೆ. ಈಗಾಗಲೇ ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ನಟಿ ಶ್ರೀಲೀಲಾ ಎಐ ದುರ್ಬಳಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಎಐ ದುರ್ಬಳಕೆ ಅದರಿಂದ ಆಗ್ತಿರುವ ಸಮಸ್ಯೆ, ತೊಂದರೆಗಳ ಬಗ್ಗೆ ಶ್ರೀಲೀಲಾ ತಮ್ಮ ಅಭಿಪ್ರಾಯವನ್ನ ಬರೆದಿದ್ದು, ಇದನ್ನು ಪ್ರೋತ್ಸಾಹಿಸದಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ.
ಅಂದಹಾಗೆ ನನ್ನ ಶೆಡ್ಯೂಲ್‌ನಿಂದಾಗಿ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಅನೇಕ ವಿಷಯಗಳ ಬಗ್ಗೆ ನನಗೆ ತಿಳಿದಿರುವುದಿಲ್ಲ. ಇದನ್ನು ನನ್ನ ಗಮನಕ್ಕೆ ತಂದಿದ್ದಕ್ಕಾಗಿ ನನ್ನ ಹಿತೈಷಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಯಾವಾಗಲೂ ನನ್ನದೇ ಆದ ಜಗತ್ತಿನಲ್ಲಿರುತ್ತೇನೆ. ಆದರೆ ಇದು ತುಂಬಾ ತೊಂದರೆ ಉಂಟುಮಾಡುವ ಬೆಳವಣಿಗೆ, ಇದು ತುಂಬಾ ವಿನಾಶಕಾರಿಯಾಗಿದೆ. ನನ್ನ ಸಹೋದ್ಯೋಗಿಗಳು ಅದೇ ರೀತಿ ಅನುಭವಿಸುತ್ತಿರುವುದನ್ನು ನಾನು ನೋಡಿದ್ದೇನೆ. ಹೀಗಾಗಿ ಎಲ್ಲರ ಪರವಾಗಿ ಇದನ್ನು ಹೇಳುತ್ತಿದ್ದೇನೆ ಎಂದು ಶ್ರೀಲೀಲಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ನಟಿ ಶ್ರೀಲೀಲಾ ಏಕಾಏಕಿ ಎಐ ದುರ್ಬಳಕೆ ವಿರುದ್ಧ ಪೋಸ್ಟ್ ಮಾಡಿರೋದು ಅಚ್ಚರಿ ಉಂಟು ಮಾಡಿದೆ. ಅಷ್ಟಕ್ಕೂ ಶ್ರೀಲೀಲಾ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಆಗ್ತಿವೆ ಅನ್ನೋ ಕಾರಣಕ್ಕೆ ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ಮುಂದಿನ ಕ್ರಮವನ್ನು ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ ಶ್ರೀಲೀಲಾ.
