ಉದಯವಾಹಿನಿ, ಮದ್ದೂರು: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಅನ್ಯಕೋಮಿನವರಿಂದ ಕಲ್ಲು ತೂರಾಟ ನಡೆದಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್ ಬಹುತೇಕ ಯಶಸ್ವಿಯಾಗಿದ್ದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.ಬೆಳಗ್ಗಿನಿಂದಲೇ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ತಬ್ದಗೊಂಡಿದ್ದವು. ಪ್ರತಿದಿನ ಬಸ್, ಅಟೋ, ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಪಟ್ಟಣದಲ್ಲಿ ಒಂದು ರೀತಿ ನೀರವ ಮೌನ ಆವರಿಸಿತ್ತು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ಕೊಟ್ಟಿದ್ದರು. ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತವಾಗಿದ್ದರೂ ಸಹ ಮದ್ದೂರು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಬಿಜೆಪಿ ಬೆಂಬಲ ಕೊಟ್ಟಿತ್ತು. ಮದ್ದೂರಿನ ಕೆಎಂ ದೊಡ್ಡಿ, ಬೆಸಗರಹಳ್ಳಿ, ಕೆಸ್ತೂರು ಸೇರಿದಂತೆ ಹೋಬಳಿ ಕೇಂದ್ರಗಳು ಸಹ ಬಂದ್ ಆಗಿದ್ದವು. ಸಾವಿರಾರು ಜನ ಹಿಂದೂ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗಿಯಾಗಿ ಪಟ್ಟಣದ ಪೇಟೆ ಬೀದಿ ಮೂಲಕ ಐಬಿ ವೃತ್ತದವರೆಗೂ ರ್ಯಾಲಿ ನಡೆಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ವರು ಎಸ್ಪಿಗಳು, ಹೆಚ್ಚುವರಿ ಎಸ್ಪಿಗಳು ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳು ಸೇರಿದಂತೆ ಸುಮಾರು 800 ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
