ಉದಯವಾಹಿನಿ, ಕೊಪ್ಪಳ: ಬಜಾಜ್ ಗ್ರೂಪ್ ಜೊತೆಗಿನ ಸಹಭಾಗಿತ್ವದ ಮುಕಂದ ಸುಮಿ ಕಂಪನಿ ಮೂಲಕ ಕೊಪ್ಪಳದಲ್ಲಿನ ಉಕ್ಕು ತಯಾರಿಕಾ ಘಟಕದಲ್ಲಿ 2,345 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದನ್ನು ಸುಮಿಟೊಮೊ ಖಚಿತಪಡಿಸಿದೆ.
ಈ ಕುರಿತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮಾಹಿತಿ ನೀಡಿದ್ದು, ಈ ಘಟಕವು 2028ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ವಾರ್ಷಿಕ 3,50,000 ಟನ್‌ಗಳಷ್ಟು ಕಬ್ಬಿಣ, ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಬಯೊಮಾಸ್ ಘಟಕವನ್ನು ಸ್ಥಾಪಿಸುವ ಬಗ್ಗೆಯೂ ಸುಮಿಟೊಮೊ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಚಿವರು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ತನ್ನ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರಿಕ್ವೆನ್ಸಿ ಡ್ರೈವ್ಸ್ ಘಟಕ ಸ್ಥಾಪಿಸುವ ಸಂಬಂಧದ ಬಂಡವಾಳ ಹೂಡಿಕೆಯನ್ನು ಯಸ್ಕಾವಾ ಕಂಪನಿಯು ರಾಜ್ಯದ ನಿಯೋಗಕ್ಕೆ ಖಚಿತಪಡಿಸಿದೆ. ಇದು ಅತ್ಯಾಧುನಿಕ ತಯಾರಿಕಾ ತಂತ್ರಜ್ಞಾನದ ಕೇಂದ್ರವಾಗಿ ಬೆಳೆಯುವ ಮೂಲಕ ಕರ್ನಾಟಕದ ಸ್ಥಾನವನ್ನು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ. ಪಾಲುದಾರಿಕೆಯಡಿ ಹುಬ್ಬಳ್ಳಿಯಲ್ಲಿರುವ ಪ್ರತಿಷ್ಠಿತ ಎನ್‌ಜಿಇಎಫ್ ಕಾರ್ಖಾನೆ ಪುನ:ಶ್ಚೇತನದ ಸಾಧ್ಯತೆಗಳ ಕುರಿತು ಜಪಾನಿನ ಜೆಎಫ್‌ಇ ಷೋಜಿ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದ್ದು, ಕಾರ್ಖಾನೆಗೆ ಆಹ್ವಾನ ನೀಡಿದ್ದಾರೆ.
ಬಂಡವಾಳ ಹೂಡಿಕೆ ಆಕರ್ಷಿಸಲು ಜಪಾನ್‌ಗೆ ಭೇಟಿ ನೀಡಿರುವ ರಾಜ್ಯ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಸಚಿವರು, ಕಂಪನಿಯ ಉನ್ನತಾಧಿಕಾರಿಗಳ ಜೊತೆ ಬುಧವಾರ ನಡೆದ ಸಭೆಯಲ್ಲಿ ಹುಬ್ಬಳ್ಳಿ ಎನ್‌ಜಿಇಎಫ್ ಪುನಶ್ಚೇತನದ ಪ್ರಸ್ತಾವ ಮುಂದಿಟ್ಟಿದ್ದಾರೆ. ವಿದ್ಯುತ್ ಪರಿವರ್ತಕಗಳ ತಯಾರಿಕೆಯಲ್ಲಿ ಜೆಎಫ್‌ಇ ಮುಂಚೂಣಿಯಲ್ಲಿದೆ. ಹುಬ್ಬಳ್ಳಿಯಲ್ಲಿ ಇರುವ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿರುವ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿಯನ್ನು (ಎನ್‌ಜಿಇಎಫ್) ರಾಜ್ಯ ಸರ್ಕಾರದ ಪಾಲುದಾರಿಕೆಯಡಿ ಪುನಶ್ಚೇತನಗೊಳಿಸುವ ಸಂಬಂಧ ಪೂರ್ವಭಾವಿ ಮಾತುಕತೆ ನಡೆಸಲು ಕಂಪನಿಯ ಉನ್ನತಾಧಿಕಾರಿಗಳು ಹುಬ್ಬಳ್ಳಿಯ ಘಟಕಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!