ಉದಯವಾಹಿನಿ, ತಿರುವನಂತಪುರಂ: ಸೆಕ್ಸ್‌ ವರ್ಕರ್ಸ್‌ಗಳಿಂದ ಸೇವೆ ಪಡೆಯುವ ವ್ಯಕ್ತಿಯನ್ನು ‘ಗ್ರಾಹಕ’ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಲೈಂಗಿಕ ಕಾರ್ಯಕರ್ತೆ ‘ಉತ್ಪನ್ನ’ (ವಸ್ತು) ಅಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ. ಲೈಂಗಿಕ ಕಾರ್ಯಕರ್ತೆಯರ ಸೇವೆಗಳನ್ನು ಪಡೆಯುವ ವ್ಯಕ್ತಿಯ ವಿರುದ್ಧ ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆ 1956ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು. ಏಕೆಂದರೆ ಲೈಂಗಿಕ ಕಾರ್ಯಕರ್ತೆಗೆ ಹಣ ಪಾವತಿಸುವ ಮೂಲಕ ವೇಶ್ಯಾವಾಟಿಕೆಗೆ ಪ್ರೇರೇಪಿಸುವಂತಾಗುತ್ತದೆ ಎಂದು ನ್ಯಾಯಮೂರ್ತಿ ವಿ.ಜಿ. ಅರುಣ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಮತ್ತೆ ಅನುಚಿತ ವರ್ತನೆ ತೋರಿದ್ರೆ ದರ್ಶನ್‌ ಬಳ್ಳಾರಿಗೆ ಶಿಫ್ಟ್‌ – ಐಜಿಪಿಗೆ ಅಧಿಕಾರ‌ ಕೊಟ್ಟ ಕೋರ್ಟ್
1956ರ ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) (Immoral Traffic) ಕಾಯ್ದೆಯ ಸೆಕ್ಷನ್ 3 (ವೇಶ್ಯಾಗೃಹವನ್ನು ನಡೆಸಿದ್ದಕ್ಕಾಗಿ ಶಿಕ್ಷೆ), 4 (ಇನ್ನೊಬ್ಬ ವ್ಯಕ್ತಿಯ ವೇಶ್ಯಾವಾಟಿಕೆಯ ಗಳಿಕೆಗೆ ಅವಲಂಬನೆಗೆ ಶಿಕ್ಷೆ), 5(1)(d) (ವೇಶ್ಯಾವಾಟಿಕೆ ಪ್ರೇರಣೆ), ಮತ್ತು 7 (ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಗೆ ಶಿಕ್ಷೆ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸೇವೆ ಪಡೆಯುವ ವ್ಯಕ್ತಿಯನ್ನು ‘ಗ್ರಾಹಕ’ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಲೈಂಗಿಕ ಕಾರ್ಯಕರ್ತೆ ‘ಉತ್ಪನ್ನ’ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಮಾರ್ಚ್ 2021 ರಲ್ಲಿ ಪೆರೂರ್ಕಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಡಪ್ಪನಕುನ್ನುವಿನ ಮನೆಯೊಂದರಲ್ಲಿ ಅರ್ಜಿದಾರ ಮತ್ತು ಮಹಿಳೆಯೊಬ್ಬರು ಬೆತ್ತಲೆಯಾಗಿ ಪತ್ತೆಯಾಗಿದ್ದರು. ಈ ಪ್ರಕರಣದ ಇತರ ಇಬ್ಬರು ಆರೋಪಿಗಳು ಮೂವರು ಮಹಿಳೆಯರನ್ನು ಹಣಕೊಟ್ಟು ಖರೀದಿಸಿ ವೇಶ್ಯಾವಾಟಿಕೆ ಉದ್ದೇಶಕ್ಕಾಗಿ ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು.

Leave a Reply

Your email address will not be published. Required fields are marked *

error: Content is protected !!