ಉದಯವಾಹಿನಿ, ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ..! ಈ ಡೈಲಾಗ್ ʻಕಾಂತಾರʼ ಸಿನಿಮಾದಲ್ಲಿ ಕೇಳಿರುತ್ತೀರಿ. ಅದೇ ರೀತಿ ಮಲೆನಾಡಲ್ಲಿಒಂದು ರೀತಿ ಸೊಪ್ಪು ಇರುತ್ತೆ.. ಅದನ್ನ ಮುಟ್ಟಿದ್ರೆ ಮೈ ಕೈಯೆಲ್ಲ ತುರಿಕೆ, ಅಲರ್ಜಿ ಆಗುತ್ತೆ. ಈಗ ಸ್ಪೇನ್‌ನ (Spain) ಕಡಲ ತೀರಕ್ಕೆ ಅಂತಹದ್ದೇ ಒಂದು ಸಮಸ್ಯೆ ಎದುರಾಗಿದೆ. ಇಲ್ಲಿನ ಕಡಲ ತೀರಕ್ಕೆ (Beach) ಪುಟ್ಟ ಡ್ರ್ಯಾಗನ್‌ಗಳು (Blue Dragons) ದಾಳಿ ಮಾಡಿ, ಬೀಚ್‌ಗಳನ್ನು ಮುಚ್ಚುವಂತೆ ಮಾಡಿವೆ. ಈ ಪುಟ್ಟ ನೀಲಿ ಡ್ರ್ಯಾಗನ್‌ಗಳು ನೋಡಲು ಸುಂದರವಾಗಿವೆ. ಹಾಗಂತ ಮುಟ್ಟಲು ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಅಂದ ಹಾಗೆ ಈ ಪುಟ್ಟ ದಾಳಿಕೋರರು ಯಾರು? ಇವುಗಳ ವಿಶೇಷ ಏನು? ಎಂಬುದನ್ನ ಇಲ್ಲಿ ವಿವರಿಸಲಾಗಿದೆ.
ಕಡಲ ಸೌಂದರ್ಯ ಹೆಚ್ಚಿಸುವ ನೀಲಿ ಅಪ್ಸರೆಯರು ಮೆಡಿಟರೇನಿಯನ್ ಸಮುದ್ರದಲ್ಲಿ ಕಾಣಸಿಗುತ್ತವೆ. ಮೇಲಿನಿಂದ ನೋಡಿದಾಗ ಈ ತೇಲುವ ಮೃದಂಗ್ವಿಗಳ (ಗ್ಲಾಕಸ್ ಅಟ್ಲಾಂಟಿಕಸ್) ಬಿಳಿ-ಬೂದು ಬಣ್ಣದ ಹೊಟ್ಟೆ ಕಾಣುವುದಿಲ್ಲ. ಕೆಳಗಿನಿಂದ, ಅವು ಪ್ರಕಾಶಮಾನವಾದ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತವೆ. ನೀರಿನಲ್ಲಿ ಸಮುದ್ರದ ಬಣ್ಣದ್ಲಲ್ಲೇ ಇರುವುದರಿಂದ ಇವು ಪರಭಕ್ಷಕಗಳಿಂದ ಪಾರಾಗುತ್ತವೆ. ಇವುಗಳನ್ನು ಅಕಸ್ಮಾತ್ ಮುಟ್ಟಿದ್ರೆ ಭಾರೀ ಸಂಕಷ್ಟವನ್ನೇ ಅನುಭವಿಸಬೇಕಾಗುತ್ತದೆ. ಅಂದರೆ ಉರಿಯೂತ, ವಾಕರಿಕೆ, ನೋವು, ವಾಂತಿ ಅಥವಾ ತೀವ್ರವಾದ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಇಷ್ಟೇ ಅಲ್ಲದೇ ಅವು ಚರ್ಮದ ಮೇಲೆ ಗಾಯಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
