ಉದಯವಾಹಿನಿ, ಇಸ್ರೇಲ್: ಇರಾನ್ ಬೆಂಬಲಿತ ಹೌತಿ ಉಗ್ರಗಾಮಿ ಗುಂಪಿನ ಮೇಲೆ ಯೆಮೆನ್‌ನಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಬುಧವಾರ ದಾಳಿ ನಡೆಸಿವೆ. ಈ ವೇಳೆ ಹೌತಿಗಳಿಗೆ ಸಂಬಂಧಿಸಿದ ಮಿಲಿಟರಿ ಮಾಹಿತಿ ಕಚೇರಿ ಮತ್ತು ಇಂಧನ ಸಂಗ್ರಹಣಾ ಸ್ಥಳಗಳು ನಾಶವಾಗಿವೆ. ಯೆಮೆನ್‌ನ ರಾಜಧಾನಿ ಸನಾ ಮತ್ತು ಉತ್ತರ ಪ್ರಾಂತ್ಯದ ಅಲ್ ಜಾವ್ಫ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಸುಮಾರು 35 ಮಂದಿ ಸಾವನ್ನಪ್ಪಿದ್ದಾರೆ. ಹೌತಿ ಉಗ್ರಗಾಮಿಗಳು ಮತ್ತು ಇಸ್ರೇಲ್ ರಕ್ಷಣಾ ಪಡೆಗಳ ನಡುವೆ ಸಂಘರ್ಷ ಮುಂದುವರಿದಿದೆ. 2014ರಲ್ಲಿ ಸನಾವನ್ನು ಹೌತಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಎರಡು ವರ್ಷಗಳ ಹಿಂದೆ ಗಾಜಾದಲ್ಲಿ ಇರಾನ್‌ ಮತ್ತು ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾದ ಬಳಿಕ ಇಸ್ರೇಲ್ ಮತ್ತು ಕೆಂಪು ಸಮುದ್ರದ ಹಡಗುಗಳ ಮೇಲೆ ಹೌತಿ ಉಗ್ರಗಾಮಿಗಳು ಕ್ಷಿಪಣಿ ಮತ್ತು ಡ್ರೋನ್‌ ದಾಳಿಗಳನ್ನು ನಡೆಸಲು ಪ್ರಾರಂಭಿಸಿದರು.ಹೌತಿ ಉಗ್ರಗಾಮಿಗಳ ದಾಳಿಗೆ ಪ್ರತಿಯಾಗಿ ಇದೀಗ ಇಸ್ರೇಲ್ ಸೇನೆಗಳು ಯೆಮೆನ್ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಪ್ರಧಾನಿ ಮತ್ತು ಹೌತಿ ಸಂಪುಟದ ಒಂಬತ್ತು ಸದಸ್ಯರು ಹತರಾಗಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು ಬುಧವಾರ ಹೌತಿಗಳಿಗೆ ಸಂಬಂಧಿಸಿದ ನೆಲೆಗಳ ಮೇಲೆ ದಾಳಿ ನಡೆಸಿದ ದಾಳಿಯಲ್ಲಿ ಅವುಗಳ ಮಿಲಿಟರಿ ಮಾಹಿತಿ ಕಚೇರಿ ಮತ್ತು ಇಂಧನ ಸಂಗ್ರಹಣಾ ಸ್ಥಳವು ನಾಶವಾಗಿವೆ. ಸನಾದಲ್ಲಿ 28 ಜನರು ಮತ್ತು ಅಲ್ ಜಾವ್ಫ್‌ನಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಒಟ್ಟು 131 ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಪತ್ರಿಕೆಗಳ ಕಚೇರಿಗಳು ಸೇರಿದಂತೆ ನಾಗರಿಕ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರಿ ತಿಳಿಸಿದ್ದಾರೆ.
ಹಸಿವಿನಿಂದ ಬಳಲುತ್ತಿರುವ ಗಾಜಾ ಪಟ್ಟಿಯ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲು ಇಸ್ರೇಲ್ ಮೇಲೆ ಒತ್ತಡ ಹೆಚ್ಚಿಸುವುದಾಗಿ ಜುಲೈ ಅಂತ್ಯದಲ್ಲಿ ಹೌತಿಗಳು ಪ್ರತಿಜ್ಞೆ ಮಾಡಿದರು. ಭಾನುವಾರ ಇದು ದಕ್ಷಿಣ ಇಸ್ರೇಲ್‌ನ ರಾಮನ್ ವಿಮಾನ ನಿಲ್ದಾಣದ ಆಗಮನದ ಹಾಲ್‌ ಮೇಲೆ ಡ್ರೋನ್ ದಾಳಿ ನಡೆಸಿತ್ತು.

Leave a Reply

Your email address will not be published. Required fields are marked *

error: Content is protected !!