ಉದಯವಾಹಿನಿ, ಬ್ಯಾಂಕಾಕ್: ಪ್ರವಾಸಿಗರ ಮುಂದೆಯೇ ಸಿಂಹಗಳು ಮೃಗಾಲಯದ ಸಿಬ್ಬಂದಿಯನ್ನು ಕೊಂದು ಹಾಕಿರುವ ಘಟನೆ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ನಡೆದಿದೆ. ಈ ಕುರಿತು ಸಂತಾಪ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಮೃಗಾಲಯದಲ್ಲಿದ್ದ ಸಿಂಹಗಳ ಗುಂಪು ಪ್ರವಾಸಿಗರ ಮುಂದೆಯೇ 58 ವರ್ಷದ ಮೃಗಾಲಯದ ಪಾಲಕ ಜಿಯಾನ್ ರಂಗ್ಖರಸಾಮೀ ಎಂಬಾತನನ್ನು ಕೊಂದು ಹಾಕಿದೆ. ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಅವರು ಸಿಂಹದ ಆವರಣದೊಳಗೆ ಬಂದಿದ್ದರು ಎನ್ನಲಾಗಿದೆ.
ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಿಯಾನ್ ರಂಗ್ಖರಸಾಮೀ ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಸಿಂಹದ ಆವರಣದೊಳಗೆ ಕಾಲಿಟ್ಟ ಕೂಡಲೇ ಸಿಂಹಗಳು ಅವರ ಮೇಲೆ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ʼʼಜನಪ್ರಿಯ ತೆರೆದ ಮೃಗಾಲಯ ಮತ್ತು ಪ್ರವಾಸಿಗರ ಆಕರ್ಷಣೆಯಾಗಿದ್ದ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ರಂಗ್ಖರಸಾಮೀ ಮೇಲೆ ಸಿಂಹಗಳ ಹಿಂಡೊಂದು ಸುಮಾರು 15 ನಿಮಿಷಗಳ ಕಾಲ ದಾಳಿ ನಡೆಸಿದೆ. ಬಳಿಕ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಅವರು ಅಲ್ಲಿ ಸಾವನ್ನಪ್ಪಿದರುʼʼ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
