ಉದಯವಾಹಿನಿ, ಚಂಡೀಗಢ: ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡಿದರು. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಿರಂತರ ಮಳೆಯಿಂದಾಗಿ ಪಂಜಾಬ್‌ನ ಹಲವು ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಅಮೃತಸರಕ್ಕೆ ಆಗಮಿಸಿದ ಅವರು, ಮೊದಲು ಘೋನೆವಾಲ್ ಗ್ರಾಮಕ್ಕೆ ತೆರಳಿ, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು.ಇನ್ನೂ ರಾಹುಲ್ ಗಾಂಧಿ ಅವರು ಅಮೃತಸರದ ರಾಮದಾಸ್‌ನಲ್ಲಿರುವ ಐತಿಹಾಸಿಕ ಗುರುದ್ವಾರ ಬಾಬಾ ಬುದ್ಧ ಸಾಹಿಬ್‌ನಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಗುರುದಾಸ್ಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಇದೇ ವೇಳೆ ಅಮೃತಸರದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಮತ್ತು ಪಕ್ಷದ ಇತರ ನಾಯಕರಿದ್ದರು. ಇತ್ತೀಚಿಗೆ ಸೆ.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಪಂಜಾಬ್‌ಗೆ ಭೇಟಿ ನೀಡಿದ್ದರು. ಈ ವೇಳೆ 1,600 ಕೋಟಿ ರೂ. ಆರ್ಥಿಕ ಸಹಾಯವನ್ನು ಘೋಷಿಸಿದ್ದರು.
