ಉದಯವಾಹಿನಿ, ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಈ ವರ್ಷವೂ ಬೈಪಾಸ್ ಗಣೇಶೋತ್ಸವದ ಲಡ್ಡು ಹರಾಜು ಹಾಕಲಾಗಿದ್ದು ಬರೋಬ್ಬರಿ 4 ಲಕ್ಷದ 10 ಸಾವಿರ ರೂಪಾಯಿಗೆ ಹರಾಜು ಆಗಿದೆ. ಈ ಗಣಪತಿ ಲಡ್ಡು ತಾಲೂಕಿನ ತೊಂಡೆಬಾವಿ ಗ್ರಾಮದ ಕೃಷ್ಣಾರೆಡ್ಡಿ ಅವರ ಪಾಲಾಗಿದೆ.
ಬೈಪಾಸ್ ಗಣೇಶ ಎಂದೇ ಖ್ಯಾತಿ ಪಡೆದಿರುವ ಗೌರಿಬಿದನೂರು ಗಣಪತಿ ಉತ್ಸವದಲ್ಲಿ ಪ್ರತಿ ವರ್ಷ ಲಡ್ಡು ಅನ್ನು ಹರಾಜಿಗೆ ಇಡಲಾಗುತ್ತದೆ. ಕಳೆದ ಬಾರಿ ಕೇವಲ 1 ಲಕ್ಷ ರೂಪಾಯಿಗೆ ಮಾತ್ರ ಲಡ್ಡು ಹರಾಜು ಆಗಿತ್ತು. ಆದರೆ ಈ ಸಲ ಇದಕ್ಕಿಂತ ಭಾರೀ ಮೊತ್ತಕ್ಕೆ ಲಡ್ಡು ಹರಾಜು ಆಗಿದೆ.
ಶ್ರೀವಿದ್ಯಾಗಣಪತಿ ಯುವಕರ ಬಳಗ ವತಿಯಿಂದ ಈ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಮೊದಲಿನಿಂದ ಕೊನೆವರೆಗೂ ತೊಂಡೆಬಾವಿ ಗ್ರಾಮದ ಕೃಷ್ಣಾರೆಡ್ಡಿ ಅವರು ಹರಾಜಿನಲ್ಲಿ ಹಿಂದೆ ಬೀಳಲೇ ಇಲ್ಲ. ಹೀಗಾಗಿ ಕೃಷ್ಣಾರೆಡ್ಡಿ ಅವರು ಹರಾಜಿನಲ್ಲಿ 4 ಲಕ್ಷದ 10 ಸಾವಿರ ರೂಪಾಯಿ ಕೂಗಿ ದೇವರ ಲಡ್ಡು ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
22ನೇ ವರ್ಷದ ಬೈಪಾಸ್ ಗಣೇಶೋತ್ಸವದಲ್ಲಿ 22 ಅಡಿ ಎತ್ತರದ ಪ್ರಣವ ಮಹಾರುದ್ರ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲಿ ಹಬ್ಬದ ಸಂಭ್ರಮವೇ ನೆರೆದಿತ್ತು. 20 ಕೆ.ಜಿ ತೂಕದ ಲಡ್ಡು ಹರಾಜು ನಡೆದಿದೆ. ಈ ಹರಾಜಿನಲ್ಲಿ ಬಂದಂತಹ ಹಣವನ್ನು ದೇವಸ್ಥಾನ ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ.
