ಉದಯವಾಹಿನಿ, ಬೆಂಗಳೂರು: ಮನೆಗಳನ್ನು ಬಾಡಿಗೆ ಪಡೆದು, ಲೀಸ್‍ಗೆ ಕೊಟ್ಟು ನೂರಾರು ಮಂದಿಗೆ ವಂಚನೆ ಮಾಡಿದ ಆರೋಪ ನಗರದ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕನ ವಿರುದ್ಧ ಕೇಳಿಬಂದಿದೆ.
ವಿವೇಕ್ ಕೇಶವನ್ ಎಂಬಾತ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಬ್ರೋಕರ್ ಕಂಪನಿಯ ಮಾಲೀಕನಾಗಿದ್ದು, ಈತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಈತ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮನೆಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಬಳಿಕ ಲೀಸ್‍ಗಾಗಿ ಮನೆ ಹುಡುಕುತ್ತಿದ್ದವರಿಗೆ ವೆಬ್‍ಸೈಟ್‍ನಲ್ಲಿ ಗಾಳ ಹಾಕುತ್ತಿದ್ದ. ಬಳಿಕ ಅವರಿಂದ ಹಣ ಪಡೆದು ಮನೆ ಕೀ ನೀಡುತ್ತಿದ್ದ. ಮನೆ ಮಾಲೀಕರಿಗೆ ಸರಿಯಾಗಿ 2 ತಿಂಗಳು ಬಾಡಿಗೆ ಹಣ ನೀಡುತ್ತಿದ್ದ. ಆಮೇಲೆ ಹಣ ಕೊಡುತ್ತಿರಲಿಲ್ಲ. ಮನೆಯಲ್ಲಿದ್ದವರನ್ನು ಮಾಲೀಕರು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. 60 ಕೋಟಿ ರೂ.ಗೂ ಹೆಚ್ಚಿನ ಹಣ ವಂಚಿಸಿದ್ದಾನೆ.
ಲಕ್ಷಾಂತರ ರೂ. ಹಣ ಕೊಟ್ಟು ಲೀಸ್‍ಗೆ ಪಡೆದಿದ್ದವರು ಮಾತ್ರ ಬೀದಿಗೆ ಬಿದ್ದಿದ್ದಾರೆ. ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ವಂಚನೆಗೊಳಗಾದ ಜನ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಫೋಟೋ ಸಹ ತೆಗೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
