ಉದಯವಾಹಿನಿ, ನವದೆಹಲಿ: ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಸಾರ್ವಕಾಲಿಕ ಶ್ರೇಷ್ಠ ಟಿ20ಐ ಬ್ಯಾಟ್ಸ್‌ಮನ್ ಆಗಿ ವಿರಾಟ್ ಕೊಹ್ಲಿಯನ್ನು ಆರಿಸಿದ್ದಾರೆ. ಕ್ರಿಕ್‌ಬಝ್ ಸಂಭಾಷಣೆಯಲ್ಲಿ ಭಾಗವಹಿಸಿದ್ದ ದಿನೇಶ್ ಕಾರ್ತಿಕ್‌ಗೆ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ನಡುವೆ ಉತ್ತಮ ಟಿ20ಐ ಬ್ಯಾಟ್ಸ್‌ಮನ್ ಅನ್ನು ಆರಿಸಲು ಕೇಳಲಾಯಿತು. ಇದಕ್ಕೆ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್, ಆಧುನಿಕ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಯನ್ನು ಆರಿಸಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಕಡೆಗಣಿಸಿದ್ದಾರೆ.ಮೂರನೇ ಸುತ್ತಿನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಉತ್ತಮ ಟಿ20ಐ ಬ್ಯಾಟ್ಸ್‌ಮನ್ ಅನ್ನು ಆರಿಸಲು ನಾಲ್ವರು ಆಟಗಾರರನ್ನು ನೀಡಲಾಯಿತು. ಈ ವೇಳೆ ಎಂಎಸ್ ಧೋನಿ ಬದಲಿಗೆ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಬದಲಿಗೆ ಎಬಿ ಡಿವಿಲಿಯರ್ಸ್ ಅವರನ್ನು ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದ್ದಾರೆ. ಇನ್ನು ಅಂತಿಮ ಸುತ್ತಿನಲ್ಲಿ ಆರ್‌ಸಿಬಿ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್ ಅವರ ಬದಲು ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಟಿ20ಐ ಬ್ಯಾಟ್ಸ್‌ಮನ್ ಆಗಿ ಆರಿಸಿದ್ದಾರೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 76 ರನ್‌ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಭಾರತ ತಂಡ, ಗೆದ್ದು ಎರಡನೇ ಬಾರಿ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರು 125 ಪಂದ್ಯಗಳಿಂದ 48.69ರ ಸರಾಸರಿ ಹಾಗೂ 137.04ರ ಸ್ಟ್ರೈಕ್ ರೇಟ್‌ನಲ್ಲಿ 4188 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 36ರ ಪ್ರಾಯದ ಬ್ಯಾಟ್ಸ್‌ಮನ್ ಒಂದು ಶತಕ ಹಾಗೂ 38 ಅರ್ಧಶತಕಗಳನ್ನು ಬಾರಿಸಿದ್ದಾರೆ. 2022ರ ಏಷ್ಯಾ ಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್‌ಗಳನ್ನು ಕಲೆ ಹಾಕಿದ್ದು, ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
