ಉದಯವಾಹಿನಿ, ನವದೆಹಲಿ: ತನ್ನ ಎರಡನೇ ಮಗುವನ್ನು ಸ್ವಾಗತಿಸಿದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ (Jwala Gutta) ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗೆ ಎದೆಹಾಲು ದಾನ ಮಾಡುವ ಮೂಲಕ ಶಿಶು ಆರೋಗ್ಯಕ್ಕೆ ತನ್ನ ಬೆಂಬಲವನ್ನು ಘೋಷಿಸಿದ್ದಾರೆ. ಅವರು 30 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾರೆ. ದಾನಿಗಳ ಹಾಲಿನ ಮೂಲಕ ಜೀವ ಉಳಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೊಡುಗೆಯನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ಬ್ಯಾಡ್ಮಿಂಟನ್ ತಾರೆ ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಹಾಗೂ ಎಲ್ಲಾ ತಾಯಂದಿರು ಎದೆ ಹಾಲನ್ನು ದಾನ ಮಾಡುವಂತೆ ಪ್ರೇರೇಪಿಸಿದ್ದಾರೆ.
“ಎದೆ ಹಾಲು ಜೀವಗಳನ್ನು ಉಳಿಸುತ್ತದೆ. ಅಕಾಲಿಕ ಮತ್ತು ಅನಾರೋಗ್ಯ ಪೀಡಿತ ಶಿಶುಗಳಿಗೆ, ದಾನಿಗಳ ಹಾಲಿನಿಂದ ಜೀವನವನ್ನು ಬದಲಾಯಿಸಬಹುದು. ನೀವು ದಾನ ಮಾಡಲು ಸಾಧ್ಯವಾದರೆ, ಅಗತ್ಯವಿರುವ ಕುಟುಂಬಕ್ಕೆ ನೀವು ನಾಯಕಿಯಾಗಬಹುದು. ಇನ್ನಷ್ಟು ತಿಳಿಯಿರಿ, ಈ ಮಾತನ್ನು ಹಂಚಿಕೊಳ್ಳಿ ಮತ್ತು ಹಾಲಿನ ಬ್ಯಾಂಕುಗಳನ್ನು ಬೆಂಬಲಿಸಿ,” ಎಂದು ಜ್ವಾಲಾ ಗುಟ್ಟಾ ಟ್ವೀಟ್ ಮಾಡಿದ್ದಾರೆ.
