ಉದಯವಾಹಿನಿ,ಇಂಫಾಲ: ಮಣಿಪುರದ ಗಲಭೆ ಪೀಡಿತ ಪ್ರದೇಶಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನವನ್ನು ಪೊಲೀಸರು ಗುರುವಾರ ತಡೆದಿದ್ದಾರೆ. ಹಿಂಸಾಚಾರದಲ್ಲಿ ಅತ್ಯಂತ ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಚುರಾಚಂದಪುರಕ್ಕೆ ರಾಹುಲ್ ಗಾಂಧಿ ತೆರಳದಂತೆ ಮಣಿಪುರ ಪೊಲೀಸರು ತಡೆದಿದ್ದಾರೆ. ಮೈತೇಯಿ ಬುಡಕಟ್ಟು ಸಮುದಾಯದ ಪ್ರತಿಭಟನೆ ಮತ್ತು ಗಲಭೆಯಿಂದಾಗಿ ಸಾವಿರಾರು ಜನರು ನೆಲೆ ಕಳೆದುಕೊಂಡಿದ್ದಾರೆ. ಹೀಗೆ ಸಂತ್ರಸ್ತರಾಗಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದ ಜನರನ್ನು ಭೇಟಿ ಮಾಡುವ ಸಲುವಾಗಿ ರಾಹುಲ್ ಗಾಂಧಿ ಅವರು ಚುರಾಚಂದಪುರಕ್ಕೆ ತೆರಳುತ್ತಿದ್ದರು.
ಮಣಿಪುರ ಭೇಟಿಗಾಗಿ ಅವರು ಗುರುವಾರ ಬೆಳಿಗ್ಗೆ ಇಂಫಾಲಕ್ಕೆ ವಿಮಾನದ ಮೂಲಕ ಬಂದಿಳಿದರು. ಈ ವರ್ಷದ ಮೇ ತಿಂಗಳಲ್ಲಿ ಜನಾಂಗೀಯ ಕಲಹ ಆರಂಭವಾದ ಬಳಿಕ ರಾಜ್ಯಾದ್ಯಂತ 300ಕ್ಕೂ ಅಧಿಕ ಪರಿಹಾರ ಶಿಬಿರಗಳಲ್ಲಿ ಸುಮಾರು 50 ಸಾವಿರ ಜನರು ವಾಸಿಸುತ್ತಿದ್ದಾರೆ. ಇಂಫಾಲದಿಂದ 20 ಕಿಮೀ ದೂರದಲ್ಲಿರುವ ಬಿಷ್ಣುಪುರದಲ್ಲಿ ಭದ್ರತಾ ಕಾರಣಗಳಿಂದ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನವನ್ನು ತಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚುರಾಚಂದಪುರಕ್ಕೆ ರಸ್ತೆ ಮಾರ್ಗವಾಗಿ ಚಲಿಸುವ ಬದಲು ಹೆಲಿಕಾಪ್ಟರ್ ಮೂಲಕ ತೆರಳುವಂತೆ ರಾಹುಲ್ ಅವರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
