ಉದಯವಾಹಿನಿ, ವ್ಯಾಂಕೋವರ್: ಭಾರತೀಯ ರಾಯಭಾರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಬೆದರಿಕೆ ಹಾಕಿದೆ. ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳು ವಿದೇಶಿ ನಿಧಿಯನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಕೆನಡಾ ಸರ್ಕಾರ ವರದಿ ಪ್ರಕಟಿಸಿದ ಬಳಿಕ ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ಸೆಪ್ಟೆಂಬರ್ 18 ರಂದು ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ಈ ಮೂಲಕ ಇಲ್ಲಿರುವ ಭಾರತೀಯ ರಾಯಭಾರಿಗಳಿಗೆ ಬೆದರಿಕೆಯೊಡ್ಡಿದೆ.
ನಿಷೇಧಿತ ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಸೆಪ್ಟೆಂಬರ್ 18ರಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿರುವ ಸಿಖ್ ಫಾರ್ ಜಸ್ಟೀಸ್, ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ಪಟ್ನಾಯಕ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದು, ಇಂಡೋ-ಕೆನಡಿಯನ್ನರು ಇವರಿಂದ ದೂರವಿರುವಂತೆ ಎಚ್ಚರಿಸಿದ್ದಾರೆ.
ಇತ್ತೀಚಿಗೆ ಕೆನಡಾ ಸರ್ಕಾರವು ತನ್ನ ನೆಲದಲ್ಲಿ ಖಲಿಸ್ತಾನಿ ಉಗ್ರಗಾಮಿ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ಇದು ವಿದೇಶಿ ನಿಧಿಯನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿದ ಬಳಿಕ ಈ ಬೆದರಿಕೆ ಬಂದಿದೆ. ಖಲಿಸ್ತಾನಿ ಉಗ್ರಗಾಮಿ ಗುಂಪುಗಳು ಮತ್ತು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಲಗಳ ನಡುವಿನ ಹಣಕಾಸಿನ ವಹಿವಾಟುಗಳನ್ನು ಸರ್ಕಾರ ಗುರುತಿಸಿದೆ. ಇವುಗಳಲ್ಲಿ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಅಂತಾರಾಷ್ಟ್ರೀಯ ಸಿಖ್ ಯುವ ಒಕ್ಕೂಟ ಸೇರಿದೆ ಎನ್ನಲಾಗಿದೆ.
ಅಲ್ಲದೇ ಭಯೋತ್ಪಾದಕ ಸಂಸ್ಥೆಗಳೆಂದು ಪಟ್ಟಿ ಮಾಡಲಾದ ಹಮಾಸ್, ಹೆಜ್ಬೊಲ್ಲಾ ಮತ್ತು ಖಲಿಸ್ತಾನಿ ಗುಂಪುಗಳು ಸೇರಿದಂತೆ ಹಲವಾರು ಸಂಘಟನೆಗಳು ಕೆನಡಾದೊಳಗಿನ ವಿವಿಧ ಮೂಲಗಳಿಂದ ಹಣಕಾಸಿನ ಬೆಂಬಲವನ್ನು ಪಡೆಯುತ್ತಿವೆ ಎಂದು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳ ವರದಿ ತಿಳಿಸಿವೆ.
