ಉದಯವಾಹಿನಿ, ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಯ ಉಗ್ರ ಪ್ರತೀಕಾರವಾಗಿ ಭಾರತ ಸೇನೆ ಆಪರೇಷನ್ ಸಿಂಧೂರ್‌ಗೆ ಪಾಕ್ ಉಗ್ರನೇ ಈಗ ಸಾಕ್ಷ್ಯ ನೀಡಿದ್ದಾನೆ.ಪಾಕಿಸ್ತಾನ ಬಹವಾಲ್‌ಪುರ ಉಗ್ರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಅಜರ್ ಮಸೂದ್‌ನ 14 ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು. ಮೃತರಲ್ಲಿ ಆತನ ಸಹೋದರ, ಅಕ್ಕ, ಸೋದರಳಿಯ ಮತ್ತು ಅವನ ಪತ್ನಿ, ಸೊಸೆ ಹಾಗೂ 5 ಮಕ್ಕಳು ಸೇರಿದ್ದಾರೆ ಎಂದು ಜೆಇಎಂ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ಹೇಳಿದ್ದಾನೆ.
ಭಯೋತ್ಪಾದನೆಯನ್ನು ಅಪ್ಪಿಕೊಂಡು ಈ ದೇಶದ ಗಡಿಗಳನ್ನು ರಕ್ಷಿಸಲು ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್‌ನಲ್ಲಿ ಹೋರಾಡಿದ್ದೇವೆ. ಎಲ್ಲವನ್ನೂ ತ್ಯಾಗ ಮಾಡಿದ್ದೇವೆ. ಮೇ 7 ರಂದು ಮೌಲಾನಾ ಮಸೂದ್ ಅಜರ್‌ನ ಕುಟುಂಬವನ್ನು ಬಹವಾಲ್ಪುರದಲ್ಲಿ ಭಾರತೀಯ ಪಡೆಗಳು ಛಿದ್ರಗೊಳಿಸಿದವು ಎಂದು ಕಾಶ್ಮೀರಿ ಉರ್ದುವಿನಲ್ಲಿ ಹೇಳಿದ್ದಾನೆ. ಭಾರತ ಮೇ 7ರ ನುಸಕಿನ ಜಾವ ಬಹಾವಲ್ಪುರದಲ್ಲಿರುವ (Bahawalpur) ಜೆಇಎಂ ಪ್ರಧಾನ ಕಚೇರಿಯ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಿಂದ ಪ್ರಧಾನ ಕಚೇರಿಯೇ ಧ್ವಂಸ ಆಗಿತ್ತು. ಅಷ್ಟೇ ಅಲ್ಲದೇ ಮಸೂದ್ ಅಜರ್‌ನ 10ಕ್ಕೂ ಹೆಚ್ಚು ಸಂಬಂಧಿಗಳು ಮೃತಪಟ್ಟಿದ್ದರು.
ಈ ಕಾರ್ಯಕ್ರಮದಲ್ಲಿ, ಮಸೂದ್ ಇಲ್ಯಾಸ್ ಕಾಶ್ಮೀರಿ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಸೇನೆ ಮತ್ತು ಅದರ ಮುಖ್ಯಸ್ಥ ಅಸಿಮ್ ಮುನೀರ್ ಬೆಂಬಲವಿದೆ ಎಂದು ಹೆಮ್ಮೆಯಿಂದ ಹೇಳಿದ್ದಾನೆ. ಅಷ್ಟೇ ಅಲ್ಲದೇ ಭಾರತೀಯ ದಾಳಿಯಲ್ಲಿ ಕೊಲ್ಲಲ್ಪಟ್ಟವರ ಅಂತ್ಯಕ್ರಿಯೆಗೆ ಪಾಕ್ ಸೇನೆಯು ತನ್ನ ಜನರಲ್‌ಗಳನ್ನು ಕಳುಹಿಸಿತ್ತು ಎಂದಿದ್ದಾನೆ. ಕಾರ್ಯಕ್ರಮದಲ್ಲಿ ಈತ ಭಾಷಣ ಮಾಡುವಾಗ ಸುತ್ತಲು ಗನ್ ಮ್ಯಾನ್ ನಿಂತಿದ್ದರು. ಇಲ್ಯಾಸ್ ಭಾಷಣ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
