ಉದಯವಾಹಿನಿ,ಬೆಂಗಳೂರು: ಸಿನಿಮಾ ತಂಡ ಬಿಡುಗಡೆಗೂ ಮುನ್ನ ಕಾಲೇಜುಗಳಲ್ಲಿ ಸುಮಾರು 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸುವ ಮೂಲಕ ವಿಭಿನ್ನ ರೀತಿಯ ಪ್ರಚಾರವನ್ನು ಆರಂಭಿಸಿದೆ. ‘ನಮಸ್ತೆ ಗೋಷ್ಟ್’ ಸಿನಿಮಾವನ್ನು ಭರತ್ ನಂದ ನಟಿಸಿ, ನಿರ್ದೇಶನ ಮಾಡಿದ್ದು, ಕಳೆದ ವರ್ಷ ಸದ್ದು ಮಾಡಿದ್ದ ‘ಈ ಸಿನಿಮಾ ಜುಲೈ.14ರಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರತಂದ ಹೊಸ ಪ್ರಯೋಗ ಕುರಿತು ಮಾತನಾಡಿದ ನಿರ್ದೇಶಕ, ನಟ ಭರತ್ ಅವರು, ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವುದು ಸಾಮಾನ್ಯದ ಮಾತಲ್ಲ. ಜನರು ಓಟಿಟಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆ. ಅಷ್ಟು ಸುಲಭವಾಗಿ ಪ್ರೇಕ್ಷಕರು ಥಿಯೇಟರ್‌ನತ್ತ ಸುಳಿಯುವುದಿಲ್ಲ. ಪ್ರತೀ ವರ್ಷ 200-300 ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ, ಮುಷ್ಠಿಯಷ್ಟು ಸಿನಿಮಾಗಳಿಗೆ ಮಾತ್ರ ಗುರ್ತಿಕೆಗಳು ಸಿಗುತ್ತವೆ.
ಹೀಗಿರುವಾಗ ಏನಾದರೊಂದು ಹೊಸ ಪ್ಲ್ಯಾನ್ ಬೇಕಾಗಿತ್ತು. ಅದಕ್ಕಾಗಿ ಈ ಯೋಜನೆ ಹಾಕಿಕೊಂಡೆವು. ಸಿನಿಮಾಗಳು ಹೆಚ್ಚು ಪ್ರಚಾರ ಪಡೆಯುವುದೇ ಜನರ ಮಾತುಗಳಿಂದ. ಸಿನಿಮಾ ನೋಡಿದವರು, ಅದನ್ನು ಇನ್ನೊಬ್ಬರಿಗೆ ಹೇಳಿದಾಗ ಅದು ಹೆಚ್ಚು ಪ್ರಚಾರವಾಗುತ್ತದೆ. ಹಾಗಾಗಿಯೇ ಈ ರೀತಿ ಮೌತ್ ಪಬ್ಲಿಸಿಟಿ ಸಿಗಲಿ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸಿದೆವು. ಸಿನಿಮಾ ತೋರಿಸಲು 30 ಕಾಲೇಜುಗಳನ್ನು ಸಂಪರ್ಕಿಸಲಾಯಿತು. ಕಾಲೇಜುಗಳ ಆಡಿಟೋರಿಯಂ ಮೂಲಕ 6000 ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸಲಾಯಿತು. ಸಿನಿಮಾ ನೋಡಿದ ವಿದ್ಯಾರ್ಥಿಗಳು ಪಾಸಿಟಿವ್ ರಿಯಾಕ್ಷನ್ ನೀಡಿದ್ದಾರೆ. ಇದರಿಂದ ಹೆಚ್ಚೆಚ್ಚು ಪ್ರೇಕ್ಷಕರಿಗೆ ನಮ್ಮ ಸಿನಿಮಾ ತಲುಪಲಿದೆ ಎಂದು ಹೇಳಿದ್ದಾರೆ.
