ಉದಯವಾಹಿನಿ, ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ನಟ ರಂಜಿತ್ ಇದೀಗ ತಮ್ಮ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಸದ್ಯ ಅವರು ಮತ್ತು ಸಹೋದರಿ ಜಗಳ ಮಾಡುತ್ತಿರುವ ವಿಡಿಯೊ ಹೊರ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಮನೆ ವಿಚಾರಕ್ಕೆ ಅಕ್ಕ ತಮ್ಮನ ನಡುವೆ ಗಲಾಟೆ ನಡೆದಿದೆ. ಜಗಳ ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತಮ್ಮ ಕುಟುಂಬದಲ್ಲೇ ಏರ್ಪಟ್ಟ ಸಣ್ಣದೊಂದು ವಿವಾದ ಇದೀಗ ರಂಜಿತ್ ಅವರನ್ನು ಠಾಣೆವರೆಗೂ ಕರೆದುಕೊಂಡು ಹೋಗಿದೆ. ಪ್ರಕರಣ ಅಷ್ಟೇನೂ ಗಂಭೀರ ಅಲ್ಲದಿದ್ದರೂ ಮನೆಯ ವಿಚಾರ ಪೊಲೀಸ್ ಠಾಣೆಗೆ ತಲುಪಿದ್ದು, ಎಲ್ಲೆಡೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ನಟ ರಂಜಿತ್ ಬಿಗ್ ಬಾಸ್ ಮನೆಯಲ್ಲಿಯೂ ಕಿರಿಕ್ ಮಾಡಿಕೊಂಡಿದ್ದರು. ನಂತರ ಹಲ್ಲೆ ಮಾಡಿದ ಆರೋಪ ಹೊತ್ತು ದೊಡ್ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಇತ್ತೀಚೆಗೆ ಅದ್ದೂರಿಯಾಗಿ ರಂಜಿತ್ ವಿವಾಹವೂ ನೆರವೇರಿತ್ತು. ಹೀಗಿರುವಾಗಲೇ ರಂಜಿತ್ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಬಂದಿದೆ.
ಪ್ರಕರಣದ ಹಿನ್ನೆಲೆ: ನಟ ರಂಜಿತ್ ಮತ್ತು ಅವರ ಅಕ್ಕನ ನಡುವೆ ವಿವಾದ ಉಂಟಾಗಿದೆ. ತಂದೆಯ ಫ್ಲಾಟ್‌ನಲ್ಲಿ ಇಬ್ಬರು ವಾಸವಿದ್ದು, ತಮ್ಮ ತಮ್ಮ ಪಾಲಿಗೆ ಸಂಬಂಧಿಸಿದಂತೆ ಇಬ್ಬರೂ ಪರಸ್ಪರ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.
ರಂಜಿತ್, ಅವರ ಅಕ್ಕ ಸೇರಿದಂತೆ ಇಡೀ ಕುಟುಂಬ ಮೊದಲಿನಿಂದಲೂ ಒಂದೇ ಫ್ಲಾಟ್‌ನಲ್ಲಿ ವಾಸವಾಗಿತ್ತು. ಇತ್ತೀಚೆಗೆ ಅಕ್ಕ ಮನೆಯಿಂದ ಹೊರ ಹೋಗಿದ್ದರು ಎನ್ನಲಾಗಿದೆ. ಇದು ತಂದೆಯ ಫ್ಲಾಟ್ ಆಗಿರುವುದರಿಂದ ಇದರಲ್ಲಿ ಇಬ್ಬರಿಗೂ ಪಾಲಿದೆ ಎಂದು ಅವರ ಅಕ್ಕ ಹೇಳಿದ್ದಾರೆ. ಹೀಗಾಗಿ, ಇಬ್ಬರಿಗೂ ಪಾಲು ಬೇಕು ಎಂದು ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಗಂಭೀರವಲ್ಲದ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಫ್ಲಾಟ್ ವಿಚಾರ ಸಿವಿಲ್ ವ್ಯಾಜ್ಯ ಆಗಿದ್ದು, ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
