ಉದಯವಾಹಿನಿ, ಬಾಗೇಪಲ್ಲಿ: ಪಟ್ಟಣದ ತಹಸೀಲ್ದಾರರ ಕಚೇರಿಯ ಮುಂದೆ ಬುಧವಾರ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐಎಂ ಪಕ್ಷ ಮತ್ತು ಶ್ರೀರಾಮರೆಡ್ಡಿ ಬಡಾವಣೆ ನಿವಾಸಿಗಳ ಕ್ಷೇಮಾ ಭಿವೃದ್ಧಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಸಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಮುನಿಯಪ್ಪ ಮಾತನಾಡಿ ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲಂದ ರಲ್ಲೆ ನಿಲ್ಲುತ್ತಿದೆ. ಅಷ್ಟೇ ಅಲ್ಲದೆ ಒಂದು ಬೀದಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅವೈಜ್ಞಾನಿಕವಾಗಿ ಇಬ್ಬದಿಗಳಲ್ಲೂ ಚರಂಡಿ ಇಲ್ಲದೆಯೇ ರಸ್ತೆ ಕಾಮಗಾರಿ ಮುಗಿಸಲಾಗಿದೆ. ಇನ್ನೊಂದು ಬೀದಿಯಲ್ಲಿ ಅರ್ಧಬರ್ಧ ಸಿಸಿ ರಸ್ತೆ ಮಾಡಲಾಗಿದೆ. ಹಾಗಾಗಿ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದು,ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಡವಾಣೆಗೆ ಶಾಶ್ವತ ರಸ್ತೆ ಮಾರ್ಗವನ್ನು ಇದುವರೆಗೆ ಸಂಬಂಧಪಟ್ಟವರು ಕಲ್ಪಿಸಿಲ್ಲ. ಆದರೆ ತಾತ್ಕಾಲಿಕ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದು,ಮಳೆ ಸುರಿದ ಪ್ರತಿಬಾರಿಯೂ ಕೆಸರುಮಯವಾಗಿ ಶಾಲಾ ಮಕ್ಕಳು,ವಯೋವೃದ್ದರು ಸೇರಿದಂತೆ ಬೈಕ್ ಸವಾರರು ಹಲವು ಬಾರಿ ಜಾರಿ ಬಿದ್ದ ಗಾಯ ಗೊಂಡ ಘಟನೆಗಳು ನಡಿದಿವೆ. ಹಲವಾರು ವರ್ಷಗಳು ಗತಿಸಿದರು ಸಮರ್ಪಕ ರಸ್ತೆ ನಿರ್ಮಾಣ ವಿಲ್ಲದೆ ರಾಡಿಯಲ್ಲೆ ಓಡಾಡಬೇಕಿದೆ. ಈ ಬಗ್ಗೆ ಎಷ್ಟೇ ಮನವಿಗಳು ಸಲ್ಲಿಸಿದರೂ ಪ್ರಯೋಜನ ವಾಗುತ್ತಿಲ್ಲ. ಹಾಗಾಗಿ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಮುಖಂಡ ಜಿ.ಕೃಷ್ಣಪ್ಪ ಮಾತನಾಡಿ, ಪುರಸಭೆ ಮತ್ತು ಪರಗೋಡು ಗ್ರಾಪಂಗಳ ತಿಕ್ಕಾಟ ದಿಂದ ನಾಗರೀಕರ ಪರಸ್ಥಿತಿ ತ್ರಿಶಂಕು ಸ್ಥಿತಿಯಲ್ಲಿದ್ದು, ರಸ್ತೆ,ಚರಂಡಿ,ಬೀದಿದೀಪ, ಶಾಲೆಯಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಈಗಿನ ಶಾಸಕರು ಕಾಳಜಿ ತೋರುತ್ತಿಲ್ಲ. ಅಲ್ಲಿನ ನಿವಾಸಿಗಳ ಗೋಳು ಕೇಳಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಲಿ. ಹಲವು ಬಾರಿ ನೀರಿನ ಶುದ್ದೀಕರಣ ಘಟಕದ ದುರಸ್ತಿ,ಚರಂಡಿ, ರಸ್ತೆಯಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟವರಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಸ್ವಚ್ಛತೆ ಇಲ್ಲದೆ ಹುಳಹುಪ್ಪಟಗಳ ಆತಂಕದಲ್ಲಿ ಇಲ್ಲಿನ ನಿವಾಸಿಗಳು ಬದುಕು ದೂಡುವಂತಾಗಿದೆ ಎಂದು ಅವಲತ್ತುಕೊಂಡರು.

Leave a Reply

Your email address will not be published. Required fields are marked *

error: Content is protected !!