ಉದಯವಾಹಿನಿ, ಮುಂಬೈ: ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಮತ್ತೊಂದು ತನಿಖೆ ನಡೆಸಬೇಕೆಂದು ಮೃತ ಪೈಲಟ್‌ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರಾಜ್ ಸಭರ್ವಾಲ್ ಒತ್ತಾಯಿಸಿದ್ದಾರೆ.
ವಿಮಾನ ದುರಂತದ ಬಗ್ಗೆ ತನಿಖೆ ನಡೆಸಿದ ವಿಮಾನ ಅಪಘಾತ ತನಿಖಾ ಬ್ಯೂರೊದ ವರದಿ ಸೋರಿಕೆಯಾದ ಬೆನ್ನಲ್ಲೇ ನಾಗರಿಕ ವಿಮಾನಯಾನ ಕಾರ್ಯದರ್ಶಿ ಮತ್ತು AAIB ಮಹಾನಿರ್ದೇಶಕರಿಗೆ 91 ವರ್ಷದ ಪುಷ್ಕರಾಜ್ ಸಭರ್ವಾಲ್ ಪತ್ರ ಬರೆದಿದ್ದಾರೆ. ನನ್ನ 56 ವರ್ಷದ ಪುತ್ರ ಮಾನಸಿಕ ಒತ್ತಡದಲ್ಲಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದ ಎಂಬ ಅಂಶಗಳು ಸೋರಿಕೆಯಾಗಿದ್ದು ಇದು ಹಲವು ಉಹಾಪೋಹಗಳಿಗೆ ಕಾರಣವಾಗಿದೆ. ವರದಿ ಸೋರಿಕೆಯಿಂದ ನನ್ನ ಮಗನ ಪ್ರತಿಷ್ಠೆಗೆ ಧಕ್ಕೆಯಾಗಿದ್ದು ಕೇಂದ್ರ ಸರ್ಕಾರ ಮತ್ತೊಂದು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಭರ್ವಾಲ್ ಸುಮಾರು 15 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರೆ ತಾಯಿ 3 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈ ಎರಡು ಘಟನೆ ನಡೆದ ಬಳಿಕವೂ ಪುತ್ರ ಅಪಘಾತವಿಲ್ಲದೆ 100 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಿದ್ದಾನೆ ಮತ್ತು ಯಾವುದೇ ಅಪಘಾತವನ್ನು ಮಾಡಿಲ್ಲ. ವಿಮಾನ ಹಾರಾಟ ಅನುಭವದಲ್ಲಿ ಉತ್ತಮ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದ್ದಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನವು ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗಲು ಟೇಕಾಫ್‌ ಆಗಿತ್ತು. ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡು ಸಮೀಪದದಲ್ಲಿದ್ದ ಮೆಡಿಕಲ್‌ ಕಾಲೇಜ್‌ ಹಾಸ್ಟೆಲಿನ ಮೆಸ್‌ ಮೇಲೆ ಬಿದ್ದಿತ್ತು. ಪರಿಣಾಮ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ ಒಟ್ಟು 260 ಜನರು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!