ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರ ಹತ್ಯೆಯ ಆರೋಪಿ 22 ವರ್ಷದ ಟೈಲರ್ ರಾಬಿನ್ಸನ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಹೀಗಾಗಿ ಆತನಿಗೆ ಮರಣ ದಂಡನೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಿರ್ಕ್ ಹತ್ಯೆಯ ಎರಡು ದಿನಗಳ ಬಳಿಕ ಆತನನ್ನು ದಕ್ಷಿಣ ಉತಾಹ್ ಸಮುದಾಯದ ಸೇಂಟ್ ಜಾರ್ಜ್ ಬಳಿ ಬಂಧಿಸಲಾಗಿತ್ತು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತಾಹ್ ಕೌಂಟಿ ವಕೀಲ ಜೆಫ್ ಗ್ರೇ, ಕಾನೂನು ಜಾರಿ ಸಂಸ್ಥೆಗಳು ಇಲ್ಲಿಯವರೆಗೆ ಸಂಗ್ರಹಿಸಿದ ಸಾಕ್ಷಿಗಳನ್ನು ಆಧರಿಸಿ 22 ವರ್ಷ ವಯಸ್ಸಿನ ಟೈಲರ್ ಜೇಮ್ಸ್ ರಾಬಿನ್ಸನ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಇದಕ್ಕಾಗಿ ಮರಣ ದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಅಧ್ಯಕ್ಷ ಟ್ರಂಪ್ ಅವರ ಆಪ್ತ ಮತ್ತು ಸಂಪ್ರದಾಯವಾದಿ ಯುವ ರಾಜಕೀಯ ಗುಂಪು ಟರ್ನಿಂಗ್ ಪಾಯಿಂಟ್ ಅಮೆರಿಕದ ಸಂಸ್ಥಾಪಕ ಚಾರ್ಲಿ ಕಿರ್ಕ್ ಅನ್ನು ಸೆಪ್ಟೆಂಬರ್ 10ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಹತ್ತಿರದ ಕ್ಯಾಂಪಸ್ ಕಟ್ಟಡದ ಛಾವಣಿಯಿಂದ ಬೋಲ್ಟ್-ಆಕ್ಷನ್ ರೈಫಲ್‌ನಿಂದ ಕಿರ್ಕ್ ಮೇಲೆ ಗುಂಡು ಹರಿಸಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಕಿರ್ಕ್ ಹತ್ಯೆಯ ಎರಡು ದಿನಗಳ ಬಳಿಕ ದಕ್ಷಿಣ ಉತಾಹ್ ಸಮುದಾಯದ ಸೇಂಟ್ ಜಾರ್ಜ್ ಬಳಿ ಶಂಕಿತ ಆರೋಪಿ ಟೈಲರ್ ರಾಬಿನ್ಸನ್‌ನನ್ನು ಬಂಧಿಸಲಾಗಿದೆ. ಕಿರ್ಕ್ ಅವರನ್ನು ಕೊಲ್ಲಲು ಬಳಸಿದ ಬಂದೂಕಿನ ಟ್ರಿಗ್ಗರ್‌ನಲ್ಲಿ ರಾಬಿನ್ಸನ್‌ನ ಡಿಎನ್‌ಎ ಕಂಡುಬಂದಿದೆ ಎಂದು ಗ್ರೇ ತಿಳಿಸಿದರು.
ರಾಬಿನ್ಸನ್ ವಿರುದ್ಧದ ಇತರ ಆರು ಆರೋಪಗಳಿವೆ. ಬಂದೂಕಿನ ಅಪರಾಧ ಪ್ರದರ್ಶನ, ನ್ಯಾಯಕ್ಕೆ ಅಡ್ಡಿ ಮತ್ತು ಸಾಕ್ಷಿಯನ್ನು ತಿರುಚುವುದು ಸೇರಿವೆ. ರಾಬಿನ್ಸನ್ ಕ್ಯಾಂಪಸ್‌ನಲ್ಲಿ ಹೋಗುವಾಗ ಆಯುಧವನ್ನು ಪ್ಯಾಂಟ್‌ನಲ್ಲಿ ಮರೆಮಾಡಿ ಇಟ್ಟಿದ್ದಾನೆ. ಆತ ತನ್ನ ಬಲಗಾಲನ್ನು ಸ್ವಲ್ಪ ಬಾಗಿಸಿ ನಡೆಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಕೊಲೆ ಆರೋಪಿಯ ಸುಳಿವು ನೀಡಿದೆ ಎಂದು ಹೇಳಿದರು. ಕಾನೂನು ಜಾರಿ ಅಧಿಕಾರಿಗಳು ಬಿಡುಗಡೆ ಮಾಡಿದ ಸಿಸಿಟಿವಿ ಚಿತ್ರದಿಂದ ರಾಬಿನ್ಸನ್‌ನ ತಾಯಿ ಅವನನ್ನು ಗುರುತಿಸಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ತಮ್ಮ ಪತಿಗೆ ತಿಳಿಸಿದರು. ಅವರು ಈ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
