ಉದಯವಾಹಿನಿ, ಕಲಬುರಗಿ: ಆಸ್ತಿ, ಕೌಟುಂಬಿಕ ಕಲಹ ಹಾಗೂ ದ್ವೇಷದಿಂದ ಕೊಲೆ ಮಾಡಿರುವದನ್ನ ನಾವು ನೋಡಿದ್ದೇವೆ. ಆದ್ರೆ ಕಲಬುರಗಿಯಲ್ಲಿ ಓರ್ವ ಯುವಕನ ಆತ್ಮಹತ್ಯೆಗೆ ಪ್ರತೀಕಾರವಾಗಿ, ಏನೂ ಅರಿಯದ, ಜೀವನದಲ್ಲಿ ಬಾಳಿ ಬದುಕಬೇಕಾದ ಯುವತಿಯನ್ನು ಬರ್ಬರ ಕೊಲೆ ಮಾಡಿದ್ದಾನೆ.
ಹೌದು. ಕಬ್ಬಿಣದ ರಾಡ್‌ನಿಂದ ಯುವತಿಯ ತಲೆಗೆ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಭಾಗ್ಯಶ್ರೀ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ನಿವಾಸಿಯಾಗಿದ್ದು, ಸೆ.11 ರಂದು ತನ್ನ ಅಕ್ಕನ ಜೊತೆ ಪ್ರತಿನಿತ್ಯದಂತೆ ರಾತ್ರಿ 8 ಗಂಟೆಗೆ ವಾಕಿಂಗ್ ಹೋಗಿದ್ದಳು. ಈ ವೇಳೆ ಈಕೆಯ ಅಕ್ಕ ಕಿರಾಣಿ ಅಂಗಡಿಗೆ ದಿನಸಿ ತರಲು ಹೋಗಿ ಬರುವಷ್ಟರಲ್ಲಿ ಭಾಗ್ಯಶ್ರೀ ನಾಪತ್ತೆಯಾಗಿದ್ದಾಳೆ. ಅದಾದ ಬಳಿಕ ಈಕೆಯ ಕುಟುಂಬಸ್ಥರು ಮಳಖೇಡ ಪೊಲೀಸ್ ಠಾಣೆಗೆ ಹೋಗಿ ಭಾಗ್ಯಶ್ರೀ ಮಿಸ್ಸಿಂಗ್ ಕೇಸ್ ಸಹ ದಾಖಲಿಸಿದ್ದಾರೆ. ಪೊಲೀಸರು ಈಕೆಯ ಹುಡುಕಾಟ ನಡೆಸುತ್ತಿರುವಾಗಲೇ ಇಂದು ಬೆಳಗ್ಗೆ ಮಳಖೇಡದ ಸಿಮೆಂಟ್ ಕಾರ್ಖಾನೆ ಪಕ್ಕದಲ್ಲಿನ ನಾಲೆಯಲ್ಲಿ ಭಾಗ್ಯಶ್ರೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹೊಡೆದು ಕೊಲೆ ಮಾಡಿರುವ ಅಂಶ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
