ಉದಯವಾಹಿನಿ, ಬೆಂಗಳೂರು: ತಮ್ಮ ಆರ್ಡರ್ ತಡವಾಗಿ ಬಂದಿದ್ದಕ್ಕಾಗಿ ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಇಬ್ಬರು ಅಮಾನುಷವಾಗಿ ಥಳಿಸಿರುವ ಘಟನೆ ಭಾನುವಾರದಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಶೋಭಾ ಥಿಯೇಟರ್ ಬಳಿ ಈ ಘಟನೆ ನಡೆದಿದ್ದು, ಆರ್ಡರ್ ವಿಳಂಬವಾದ ಬಗ್ಗೆ ಆರೋಪಿಗಳು ಫುಡ್ ಡೆಲಿವರಿ ಬಾಯಿ ಜೊತೆ ವಾಗ್ವಾದ ನಡೆಸಿದರು. ಅದು ಶೀಘ್ರದಲ್ಲೇ ಹಿಂಸಾತ್ಮಕ ರೂಪ ಪಡೆಯಿತು. ಡೆಲಿವರಿ ಬಾಯ್‌ಗೆ ಇಬ್ಬರು ಸೇರಿ ಥಳಿಸಿದ್ದಾರೆ. ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆರ್ಡರ್ ವಿಳಂಬವಾದ ಬಗ್ಗೆ ಕೋಪಗೊಂಡ ಇಬ್ಬರು ವ್ಯಕ್ತಿಗಳು ತಮ್ಮ ಸುತ್ತಲೂ ಬಿದ್ದಿದ್ದ ವಸ್ತುಗಳನ್ನು ಎತ್ತಿಕೊಂಡು ಡೆಲಿವರಿ ಬಾಯ್‍ಗೆ ಮನಸೋಇಚ್ಛೆ ಥಳಿಸಿದ್ದಾರೆ. ಒಬ್ಬ ವ್ಯಕ್ತಿ ಹತ್ತಿರದಲ್ಲಿದ್ದ ಪ್ಲಾಸ್ಟಿಕ್ ಪಾತ್ರೆಯನ್ನು ಎತ್ತಿಕೊಂಡು ಡೆಲಿವರಿ ಬಾಯ್ ತಲೆಗೆ ಎರಡು ಬಾರಿ ಹೊಡೆದರೆ, ಮತ್ತೊಬ್ಬ ವ್ಯಕ್ತಿ ಕುರ್ಚಿಯಿಂದ ಹೊಡೆದಿದ್ದಾನೆ. ಘಟನೆ ತಿಳಿದ ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಜಗಳವನ್ನು ಬಿಡಿಸಿದ್ದಾರೆ. ಡೆಲಿವರಿ ಬಾಯ್ ಹಾಗೂ ಆತನ ಮೇಲೆ ಹಲ್ಲೆ ನಡೆಸಿದ ಇಬ್ಬರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಇನ್ನು ಘಟನೆ ಸಂಬಂಧ ಡೆಲಿವರಿ ಬಾಯ್ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ.
ಜೊಮ್ಯಾಟೊ ಬಾಯ್ ಮೇಲೆ ಈ ರೀತಿಯ ಹಲ್ಲೆ ನಡೆಸಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಹೀಗಾಗಿ ಕೆಲವೊಮ್ಮೆ ಆಹಾರ ತಡವಾಗಿ ತಲುಪಬಹುದು ಎಂದು ನೆಟ್ಟಿಗರು ಹೇಳಿದ್ದಾರೆ. ವಿಳಂಬವಾಗಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಈ ರೀತಿ ಹಲ್ಲೆ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
