ಉದಯವಾಹಿನಿ, ನವದೆಹಲಿ: ಪ್ರಧಾನಮಂತ್ರಿ ಮೋದಿಯವರ 75ನೇ ಹುಟ್ಟುಹಬ್ಬದ ಆಚರಣೆ ಹಿನ್ನೆಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಹಾಗೂ ಇತರೆ ಜಾಗತಿಕ ಗಣ್ಯರು ಶುಭಾಶಯ ತಿಳಿಸಿದ್ದಾರೆ. ಈ ವೇಳೆ, ಲಖನೌದ ಗೌರವ್ ಸಿದ್ಧಾರ್ಥ್ ಕೈಗೊಂಡಿದ್ದ ದೇಶಾದ್ಯಂತ ಬೈಕ್ ಯಾತ್ರೆಯ ಗಿನ್ನೆಸ್ (Guinness) ದಾಖಲೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 2015ರ ಸೆಪ್ಟೆಂಬರ್ 17ರಂದು ಮೋದಿಯವರ 65ನೇ ಹುಟ್ಟುಹಬ್ಬದ ದಿನ, ಗೌರವ್ 1,25,000 ಕಿ.ಮೀ. ಒಂಟಿ ಯಾತ್ರೆ ಆರಂಭಿಸಿದ್ದರು.IIM ಲಕ್ನೋದ MBA ಪದವೀಧರ ಗೌರವ್, ಹೀರೋ ಇಂಪಲ್ಸ್ ಬೈಕ್‌ನಲ್ಲಿ 29 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ವರ್ಷ 8 ತಿಂಗಳು ಸಂಚರಿಸಿದರು. “2015ರಲ್ಲಿ Jio ಇರಲಿಲ್ಲ, ಡೇಟಾವನ್ನು MBಗಳಲ್ಲಿ ಉಳಿಸಬೇಕಿತ್ತು. ಪೆಟ್ರೋಲ್, ವಸತಿ ನಂತರ ಇಂಟರ್ನೆಟ್‌ಗೆ ಹೆಚ್ಚು ಖರ್ಚಾಯಿತು” ಎಂದು ಗೌರವ್ ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ. ಬಾಬಾ ರಾಮ್‌ದೇವ್ ‘ಸ್ವದೇಶಿ’ ಸಂದೇಶದೊಂದಿಗೆ ಯಾತ್ರೆಗೆ ಚಾಲನೆ ನೀಡಿದ್ದರು. ಗೌರವ್ ಗುಜರಾತ್‌ನಲ್ಲಿ ಮೋದಿಯವರ ತಾಯಿ ಹೀರಾಬೆನ್‌ರ ಆಶೀರ್ವಾದವನ್ನೂ ಪಡೆದಿದ್ದರು. 2018ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೌರವ್ ಅವರ 1,25,000 ಕಿ.ಮೀ. ಯಾತ್ರೆಯನ್ನು (1,15,000 ಕಿ.ಮೀ. ದಾಖಲಿತ) ಒಂದೇ ದೇಶದ ದೀರ್ಘಯುತ ಬೈಕ್ ಯಾತ್ರೆ ಎಂದು ದೃಢೀಕರಿಸಿತು. ಇನ್ನೂ ಇದಕ್ಕೂ ಮುಂಚೆ ಅಮೆರಿಕಾದ ಡಾನೆಲ್ ಲಿನ್ ಅವರು 78,000 ಕಿ.ಮೀ. ಕ್ರಮಿಸಿ ದಾಖಲೆ ಬರೆದಿದ್ದರು.
ಗೌರವ್ ಯಾತ್ರೆ ವೇಳೆ ನೋಟ್ ಬ್ಯಾನ್, Jio ಪ್ರಾರಂಭ, ಸಾಮಾಜಿಕ ಜಾಲತಾಣಗಳ ಜನಪ್ರಿಯತೆ, ಗಡಿಯ ಉದ್ವಿಗ್ನತೆಯನ್ನು ಕಂಡರು. “ದೇಶದಾದ್ಯಂತ ಸಾವಿರಾರು ಜನರು, ರಾಜ್ಯ, ಧರ್ಮ, ರಾಜಕೀಯ ಭೇದವಿಲ್ಲದೆ, ನನಗೆ ಸಹಾಯ ಮಾಡಿದರು. ಇದು ಭಾರತದ ಒಗ್ಗಟ್ಟಿನ ಶಕ್ತಿ,” ಎಂದು ಅವರು ಹೇಳಿದ್ದಾರೆ.
