ಉದಯವಾಹಿನಿ, ಲಂಡನ್: ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಇದೀಗ ಉದ್ಯಮಿ ನೀರವ್ ಮೋದಿ ಮತ್ತೆ ಲಂಡನ್ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸಿದೆ. ಇತ್ತೀಚೆಗಷ್ಟೇ ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ತಿಹಾರ್ ಜೈಲಿನ ಪರಿಶೀಲನೆ ನಡೆಸಿತ್ತು. ಇದರ ಬೆನ್ನಲ್ಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿಯಾಗಿರುವ ನೀರವ್ ಮೋದಿ ಭಾರತಕ್ಕೆ ತನ್ನ ಹಸ್ತಾಂತರವನ್ನು ಪ್ರಶ್ನಿಸಿ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದಲ್ಲಿ ಮತ್ತೆ ಹೊಸ ಅರ್ಜಿ ಸಲ್ಲಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 6,498 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಗಳನ್ನು ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಯುಕೆ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಅದು ಅಂತಿಮ ಮೇಲ್ಮನವಿಯನ್ನೂ ತಿರಸ್ಕರಿಸಿತ್ತು.
2022ರ ನವೆಂಬರ್ 9ರಂದು ಹೊರಡಿಸಲಾದ ಆದೇಶದ ತೀರ್ಪನ್ನು ಎತ್ತಿ ಹಿಡಿದಿರುವ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಪ್ರಕರಣವನ್ನು ಯುಕೆ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂಬ ಮೋದಿ ಅವರ ವಿನಂತಿಯನ್ನು ಕೂಡ ವಜಾಗೊಳಿಸಿದೆ. ಈ ಕುರಿತು ಇದೀಗ ವಿಚಾರಣೆಗೆ ಮತ್ತೆ ಹೊಸ ಅರ್ಜಿಯನ್ನು ನೀರವ್ ಮೋದಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಲು ಅಧಿಕಾರಿಗಳು ಮತ್ತು ಕಾನೂನು ತಂಡವು ಲಂಡನ್‌ನಲ್ಲಿ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ಇತ್ತೀಚೆಗೆ ತಿಹಾರ್ ಜೈಲಿನ ಪರಿಶೀಲನೆ ನಡೆಸಿದ ಬಳಿಕ ಇದೀಗ ಈ ಹೊಸ ಬೆಳವಣಿಗೆಗಳಾಗಿವೆ.
