ಉದಯವಾಹಿನಿ, ಭಾರತದ ಪ್ರಖ್ಯಾತ ಹಾಗೂ ಬೃಹತ್ ಓಟಿಟಿ ವೇದಿಕೆಯಾದ ಜೀ5, ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಸಹಯೋಗದಲ್ಲಿ ಒಂದು ವೆಬ್ ಸರಣಿಯನ್ನು ಘೋಷಿಸಿದ್ದು, ಇದೀಗ ಅದರ ಶೀರ್ಷಿಕೆಯನ್ನು ಘೋಷಿಸಿ ಮತ್ತೊಮ್ಮೆ ಸುದ್ದಿಯಾಗಿದೆ. ಮಾರಿಗಲ್ಲು ಎಂಬ ಶೀರ್ಷಿಕೆಯುಳ್ಳ ಈ ವೆಬ್‌ಸರಣಿ ಕರ್ನಾಟಕ ಜಾನಪದವನ್ನು ಹೇಳುವ ಒಂದು ದೈವಿಕ ಥ್ರಿಲ್ಲರ್ ಆಗಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ ಎಂಬುದು ಗಮನಾರ್ಹ ಸಂಗತಿ.
ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯನ್ನು ಹೊಂದಿರುವ ಈ ಕಥೆಯು, ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ಸಂಭ್ರಮಿಸುತ್ತಿದೆ. ಕದಂಬರ ಕಾಲದಿಂದಲೂ `ಮಾರಿ’ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕುರಿತಾಗಿ ಕಥೆಯನ್ನು ಹೆಣೆದಿದ್ದು, ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾಗಿ ಪಾತ್ರಗಳು ಯಾವ ರೀತಿ ವರ್ತಿಸುತ್ತಾರೆ, ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಷ್ಟೆ ಅಲ್ಲದೆ ಈ ಕಥೆಯು ಸಾಂಸ್ಕೃತಿಕ ಶ್ರೀಮಂತಿಕೆ, ದೈವ ಭಕ್ತಿ, ಜಾನಪದ ಮುಂತಾದ ವಿಷಯಗಳನ್ನೂ ಒಳಗೊಂಡಿರುತ್ತದೆ. ವೆಬ್ ಸರಣಿ ಕುರಿತಾಗಿ ಮಾತನಾಡಿದ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, “ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ ಮತ್ತು ಅಂತಹ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. “ಮಾರಿಗಲ್ಲು” ಅಂತಹ ಒಂದು ಕಥೆಯಾಗಿದೆ.
ಈ ಕಥೆಯು ಕೇವಲ ರಹಸ್ಯ, ಥ್ರಿಲ್, ಆಕ್ಷನ್‌ಗಳನ್ನು ಒಳಗೊಳ್ಳದೆ, ಕರ್ನಾಟಕ ಜಾನಪದ ಸಂಸ್ಕೃತಿ, ದೈವ ಭಕ್ತಿ ಮುಂತಾದವುಗಳ್ಳನ್ನೂ ಒಳಗೊಂಡಿರುವ ವಿಭಿನ್ನ ಮಿಶ್ರಣವಾಗಿದೆ. ಇದು ಪ್ರತಿಯೊಬ್ಬರು ಕಣ್ಣರಳಿಸಿ ನೋಡುವಂಥಾ ಥ್ರಿಲ್ಲರ್ ಕಥೆಯಾಗಲಿದೆ” ಎಂದು ಹೇಳಿದರು.
