ಉದಯವಾನಿ,ಶಿವಮೊಗ್ಗ: ಕಾಂಗ್ರೆಸ್‌ನಿಂದ ವಲಸೆ ಬಂದವರಿಂದ ಬಿಜೆಪಿಯಲ್ಲಿ ಶಿಸ್ತು ಹಾಳಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ವಾಹಿನಿಯೊಂದು ಹಾಗೆ ಸುಳ್ಳು ಸುದ್ದಿ ಬಿತ್ತರಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು. ‘ಹುಬ್ಬಳ್ಳಿಯಲ್ಲಿ ನಾನು ಆ ರೀತಿ ಹೇಳಿಕೆ ನೀಡಿದ್ದೇನೆ ಎಂದು ಸುದ್ದಿ ವಾಹಿನಿಯೊಂದು ಮೊದಲು ಪ್ರಸಾರ ಮಾಡಿತು. ಸಂಬಂಧಿಸಿದ ಮಾಧ್ಯಮದ ಪ್ರತಿನಿಧಿಗೆ ಆ ಬಗ್ಗೆ ನಾನು ಪ್ರಶ್ನಿಸಿದ್ದೆ. ನಾನು ಆ ಸುದ್ದಿ ಕಳಿಸಿಯೇ ಇರಲಿಲ್ಲ. ಆದರೂ ಬೆಂಗಳೂರಿನಿಂದ ಹಾಗೆ ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ಆ ಪತ್ರಕರ್ತ ಅಳಲು ತೋಡಿಕೊಂಡರು.
ಆ ಬಗ್ಗೆ ಸ್ಪಷ್ಟನೆ ಕೊಟ್ಟರೂ ಆ ಸುದ್ದಿ ವಾಹಿನಿ ಅದನ್ನು ಪ್ರಕಟಿಸಲಿಲ್ಲ’ ಎಂದು ಈಶ್ವರಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಈ ರೀತಿ ಸುಳ್ಳು ಸುದ್ದಿಯ ಪ್ರಸಾರದಿಂದ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ನಮ್ಮ ಮಿತ್ರರು ಬಹಳ ನೋವು ಮಾಡಿಕೊಂಡಿದ್ದಾರೆ. ಅದರಿಂದ ನನಗೂ ಖೇದವಾಗಿದೆ. ಈ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೂ ಮಾಹಿತಿ ನೀಡಿರುವೆ’ ಎಂದರು. ‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕಾರಣಗಳ ಬಗ್ಗೆ ಬಹಿರಂಗವಾಗಿ ಚರ್ಚಿಸುವುದು ಬೇಡ ಎಂದು ಬಿಜೆಪಿಯ ಎಲ್ಲ ಮಿತ್ರರಿಗೂ ಮನವಿ ಮಾಡಿಕೊಂಡಿರುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಜುಲೈ 3ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿಸಬೇಕು. ಇಲ್ಲದಿದ್ದರೆ ಸದನ ನಡೆಯಲು ಬಿಡುವುದಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಮಾಜಿ ಸಚಿವ ಹೇಳಿಕೆ ನೀಡಿದ್ದಾರೆ.
