ಉದಯವಾಹಿನಿ, ಪಟನಾ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಬಹಳ ಚುರುಕಿನಿಂದ ಸಾಗುತ್ತಿದ್ದು, ಗದ್ದುಗೆಗಾಗಿ ರಾಜಕೀಯ ಪಕ್ಷಗಳು, ನಾಯಕರು ಈಗಿನಿಂದಲೇ ಜಿದ್ದಿಗೆ ಬಿದ್ದಿದ್ದಾರೆ. ಒಂದೆಡೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸರ್ಕಸ್ ಮಾಡುತ್ತಿದ್ದು, ಉಚಿತ ಭಾಗ್ಯ ಘೋಷಣೆ ಸೇರಿದಂತೆ ನಾನಾ ಆಕರ್ಷಕ ಯೋಜನೆಗಳನ್ನು ಘೋಷಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ.ಆದ್ರೆ ಇತ್ತ ಮಹಾಮೈತ್ರಿಕೂಟದ ಮಿತ್ರಪಕ್ಷಗಳ ನಡುವೆ ಮನಸ್ತಾಪ ಆಗಿರುವಂತೆ ಗೋಚರವಾಗುತ್ತಿದ್ದು, ಈ ಅನುಮಾನ ಮೂಡಲು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ ಕಾರಣವಾಗಿದೆ.
ಹೌದು ಕಾಂಗ್ರೆಸ್​ ಹಾಗೂ ಆರ್​ಜೆಡಿ ಮೈತ್ರಿಕೂಟದಲ್ಲಿ ವೈಮನಸ್ಸು ಉಂಟಾಗಿದೆ ಎನ್ನಲಾಗುತ್ತಿದ್ದು, ಏಕಾಏಕಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಚುನಾವಣಾ ಸ್ಪರ್ಧೆಗೆ ಸಂಬಂಧಿಸಿದಂತೆ ಮಹತ್ತರದ ಘೋಷನೆಯೊಂದನ್ನು ಮಾಡಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ನಾವು ಮಹಾಮೈತ್ರಿಕೂಟ ಸ್ಪರ್ಧಿಸುವುದಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಈ ಹೇಳಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಮಹಾಘಟಬಂಧನದಲ್ಲಿ ಬಿರುಕು ಮೂಡಿದ್ಯಾ ಅನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಾದವ್, ಯಾವುದೇ ಮುಖಗಳಿಲ್ಲದ ಬಿಜೆಪಿಯೇ ನಾವು? ಸಿಎಂ ಸ್ಥಾನದ ಅಭ್ಯರ್ಥಿಯನ್ನು ಖಚಿತಪಡಿಸದೇ ಹೋದರೆ ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ನಮ್ಗೆ ಸರ್ಕಾರ ನಡೆಸುವುದು ಮುಖ್ಯವಲ್ಲ ಎಂದಿರುವ ಯಾದವ್ ಇನ್ನು ಸ್ವಲ್ಪ ಸಮಯದಲ್ಲಿಯೇ ಮುಖ್ಯಮಂತ್ರಿ ಯಾರು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಇಲ್ಲಿ ಸರ್ಕಾರ – ಅಧಿಕಾರ ಪಡೆಯುವುದಕ್ಕಿಂತ, ಬಿಹಾರವನ್ನು ಬೆಳೆಸಬೇಕು, ಅಭಿವೃದ್ದಿಸಬೇಕು ಅದು ನಮ್ಗೆ ಮುಖ್ಯ ಎಂದು ಯಾದವ್ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ಐದು ಅಥವಾ 10 ದಿನಗಳ ವಿಳಂಬವಾದರೂ ಯಾವುದೇ ವ್ಯತ್ಯಾಸವಿಲ್ಲ ಮೈತ್ರಿ ಪಾಲುದಾರರಲ್ಲಿ ಸೀಟು ಹಂಚಿಕೆ ವ್ಯವಸ್ಥೆಗಳ ತೀರ್ಮಾನದ ನಂತರ ನಾಯಕತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!