ಉದಯವಾಹಿನಿ, ನವದೆಹಲಿ: ಜಾರಿ ನಿರ್ದೇಶನಾಲಯ ಮೂಲದ ಇಂಪೀರಿಯಲ್ ಗ್ರೂಪ್‌ನ ಅಧ್ಯಕ್ಷ ಮನ್ವಿಂದರ್ ಸಿಂಗ್ ಅವರ ಪತ್ನಿ ಸಗ್ರಿ ಸಿಂಗ್ ಮತ್ತು ಅವರ ಸಹಚರರಿಗೆ ಸೇರಿದ ಆಸ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಸುಮಾರು 80 ಕೋಟಿ ರೂ. ಮೌಲ್ಯದ ವಿದೇಶಿ ಆಸ್ತಿಯನ್ನು (foreign stash) ವಶಕ್ಕೆ ಪಡೆದಿದೆ. ಸೆಪ್ಟೆಂಬರ್ 19 ಮತ್ತು 20 ರಂದು ಹಿಮಾಚಲ ಪ್ರದೇಶ ಮತ್ತು ದೆಹಲಿಯಾದ್ಯಂತ ಆರು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಈ ದಾಳಿ ನಡೆಸಲಾಗಿದ್ದು, 80 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಬೇನಾಮಿ ವಿದೇಶಿ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಮನ್ವಿಂದರ್ ಸಿಂಗ್ ಮತ್ತು ಸಗ್ರಿ ಸಿಂಗ್ ಹಲವಾರು ವಿದೇಶಿ ಕಂಪೆನಿಗಳು ಮತ್ತು ಆಸ್ತಿಗಳಲ್ಲಿ ಬೇನಾಮಿಯಾಗಿ ಹೂಡಿಕೆ ಮಾಡಿರುವುದು ತನಿಖೆ ವೇಳೆ ಕಂಡು ಬಂದಿದೆ.
ಸಿಂಗಾಪುರ ಮೂಲದ ಏರೋಸ್ಟಾರ್ ವೆಂಚರ್ ಪ್ರೈವೇಟ್ ಲಿಮಿಟೆಡ್, ದುಬೈನ ಯುನೈಟೆಡ್ ಏರೋಸ್ಪೇಸ್ ಡಿಡಬ್ಲ್ಯೂಸಿ ಎಲ್‌ಎಲ್‌ಸಿಯಲ್ಲಿನ ಆಸ್ತಿಗಳೂ ಇದರಲ್ಲಿ ಸೇರಿವೆ. ಈ ಸಂಸ್ಥೆಗಳು ದುಬೈ ಮೂಲಕ ನಡೆಸಲಾದ ಕೋಟ್ಯಂತರ ಮೌಲ್ಯದ ಅಸುರಕ್ಷಿತ ಸಾಲಗಳು, ವೇತನ ಪಾವತಿಗಳನ್ನು ಒಳಗೊಂಡ ಸಂಕೀರ್ಣ ವಹಿವಾಟು ಜಾಲದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಕಂಡು ಬಂದಿದೆ.
ಮನ್ವಿಂದರ್ ಸಿಂಗ್ ದಂಪತಿ ದುಬೈ ಮೂಲದ ಕಂಪೆನಿಯು ಕಳೆದ ಮೇ ತಿಂಗಳಲ್ಲಿ 7 ಕೋಟಿ ರೂ. ಮೌಲ್ಯದ ರಾಬಿನ್ಸನ್- 66 ಹೆಲಿಕಾಪ್ಟರ್ ಅನ್ನು ಖರೀದಿಸಿದೆ. ಇದಕ್ಕಾಗಿ ಹಾಂಗ್ ಕಾಂಗ್ ಮೂಲದ ಸಂಸ್ಥೆಯಿಂದ ಸಾಲ ನೀಡಿದೆ. ಈ ಹೆಲಿಕಾಪ್ಟರ್ ಅನ್ನು ಹಿಮಾಚಲ ಪ್ರದೇಶದ ಔರಮಾ ಕಣಿವೆ ಯೋಜನೆಗಾಗಿ ಭಾರತಕ್ಕೆ ತರಲಾಗಿದೆ ಎಂದು ಇಡಿ ಹೇಳಿದೆ.
