ಉದಯವಾಹಿನಿ, ತಿರುಪತಿ: ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ವೈಎಸ್ಆರ್ ಕಾಂಗ್ರೆಸ್ (YSR Congress) ಆಡಳಿತ ನಡೆಸುತ್ತಿದ್ದಾಗ ತಿರುಪತಿ ದೇವಸ್ಥಾನದ (Tirupati temple) ಕಾಣಿಕೆ ಹುಂಡಿಯಿಂದ 100 ಕೋಟಿ ರೂ. ಗೂ ಹೆಚ್ಚು ಹಣ ಕಳ್ಳತನವಾಗಿದೆ ಎಂದು ಟಿಟಿಡಿ (TTD) ಸದಸ್ಯ, ಬಿಜೆಪಿ ನಾಯಕ ಭಾನು ಪ್ರಕಾಶ್ ರೆಡ್ಡಿ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ತಿರುಪತಿ ದೇವಸ್ಥಾನದ ಹುಂಡಿಯಿಂದ ಹಲವಾರು ವೈಎಸ್ಆರ್ ಸಿಪಿ ನಾಯಕರು ಮತ್ತು ಅಧಿಕಾರಿಗಳು ಅಪಾರ ಹಣ ಲೂಟಿ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾನು ಪ್ರಕಾಶ್ ರೆಡ್ಡಿ, ವೈಎಸ್ಆರ್ ಜಗನ್ ಮೋಹನ್ ರೆಡ್ಡಿ ಅಧಿಕಾರದಲ್ಲಿದ್ದಾಗ ತಿರುಪತಿ ದೇವಸ್ಥಾನದ ದೇಣಿಗೆ ಪೆಟ್ಟಿಗೆಯಿಂದ 100 ಕೋಟಿ ರೂ. ಗೂ ಹೆಚ್ಚು ಕಳ್ಳತನವಾಗಿದೆ. ದೇವಸ್ಥಾನದ ಸಿಬ್ಬಂದಿ ರವಿಕುಮಾರ್ ದೇಣಿಗೆ ಪೆಟ್ಟಿಗೆಯಿಂದ ಹಣವನ್ನು ಕದ್ದಿದ್ದಾರೆ ಎಂದು ದೂರಿದ್ದಾರೆ.
ದೇವಸ್ಥಾನದ ಹುಂಡಿಯಿಂದ ಲೂಟಿ ಮಾಡಿದ ಹಣದಿಂದಲೇ ಕೋಟ್ಯಂತರ ರೂಪಾಯಿಗಳನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ. ಅಕ್ರಮ ಹಣವನ್ನು ಜಗನ್ ರೆಡ್ಡಿ ಅವರ ತಾಡೇಪಲ್ಲಿ ಮನೆಗೆ ಕಳುಹಿಸಲಾಗಿದೆ ಮತ್ತು ಹಗರಣದ ಅನಂತರ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ. 2019 ರಿಂದ 2024 ರವರೆಗೆ ನಡೆದ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಟಿಟಿಡಿಯ ಇತಿಹಾಸದಲ್ಲಿ 100 ಕೋಟಿ ರೂಪಾಯಿಗಳ ಕಳ್ಳತನವು ಅತ್ಯಂತ ದೊಡ್ಡ ಲೂಟಿ ಎಂದು ಅವರು ಹೇಳಿದ್ದಾರೆ.
