ಉದಯವಾಹಿನಿ, ಲಖನೌ : ಹೆಂಡತಿ ತವರಿಗೆ ಹೋದ್ರೆ ಸಾಕೆಂದು ಬಯಸುವ ಅದೆಷ್ಟೋ ಗಂಡಂದಿರ ನಡುವೆ ಇಲ್ಲೊಬ್ಬ ಭೂಪ ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಅತ್ತೆಯ ಕಾಲಿಗೆ ಸಾರ್ವಜನಿಕವಾಗಿ ಬಿದ್ದು ಗೋಳಾಡುತ್ತಿರುವ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿರುವ ಪೊಲೀಸ್ ಸ್ಟೇಷನ್ ಒಂದರ ಹೊರಗಡೆ ನಡೆದಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಆತ ಪತ್ನಿಗೆ ಹಿಂದೆ ಕೊಡುತ್ತಿದ್ದ. ಹೀಗಾಗಿ ಅತ್ತೆ ತನ್ನ ಮಗಳನ್ನು ಮತ್ತೆ ಆತನೊಂದಿಗೆ ಕಳುಹಿಸಲು ಸುತರಾಂ ಒಪ್ಪಿರಲಿಲ್ಲ. ಹೀಗಾಗಿ ಅಳಿಯ ಮಹಾಶಯ ತನ್ನ ಅತ್ತೆಯ ಕಾಲಿಗೆ ಬಿದ್ದು ಹೊರಳಾಡುತ್ತಾ, ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ತನ್ನ ಅತ್ತೆಯ ಬಳಿ ಇನ್ನು ಮುಂದೆ ಇಂತಹ ತಪ್ಪನ್ನು ಮರುಕಳಿಸುವುದಿಲ್ಲ ಎಂದಾತ ಕೈಮುಗಿದು ಪ್ರಾರ್ಥಿಸಿಕೊಳ್ಳುತ್ತಿರುವುದು ಆ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
