ಉದಯವಾಹಿನಿ, ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆ ಕೆಲವು ಹೊತ್ತು ಹ್ಯಾಕ್‌ ಆಗಿ ಸಾಕಷ್ಟು ಮುಜುಗರ ಎದುರಾಯಿತು. ಹ್ಯಾಕ್‌ ಮಾಡಿದ ಬಳಿಕ ಪಾಕಿಸ್ತಾನ ಮತ್ತು ಟರ್ಕಿಯ ಬಾವುಟ ಪೋಸ್ಟ್‌ ಮಾಡಿರುವುದು ಬೆಳಕಿಗೆ ಬಂದಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಈ ಘಟನೆ ಸಂಭವಿಸಿದೆ. ಹ್ಯಾಕರ್‌ಗಳು ಎರಡೂ ದೇಶಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಒಳಗೊಂಡ ಕಂಟೆಂಟ್‌ ಅನ್ನು ನೇರ ಪ್ರಸಾರ ಮಾಡಿ ಗೊಂದಲ ಮೂಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಾಗ್ಯೂ ಕೂಡಲೇ ಖಾತೆಯನ್ನು ಸರಿಪಡಿಸಲಾಯಿತು.
ನಾವು ತಕ್ಷಣ ಸೈಬರ್ ಅಪರಾಧ ಪೊಲೀಸರಿಗೆ ಮಾಹಿತಿ ನೀಡಿದೆವು. ಡಿಸಿಎಂ ಏಕನಾಥ ಶಿಂದೆ ಅವರ ಎಕ್ಸ್ ಹ್ಯಾಂಡಲ್ ಅನ್ನು ನಿರ್ವಹಿಸುವ ತಾಂತ್ರಿಕ ತಂಡವು 30ರಿಂದ 45 ನಿಮಿಷಗಳಲ್ಲಿ ಖಾತೆಯ ನಿಯಂತ್ರಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಯಿತು ಎಂದು ಮೂಲಗಳು ತಿಳಿಸಿವೆ. ಸೈಬರ್ ಅಪರಾಧ ಘಟಕಕ್ಕೆ ಅಧಿಕೃತವಾಗಿ ದೂರು ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲ್ ಈ ಬಗ್ಗೆ ಮಾತನಾಡಿ ಸೈಬರ್ ಸುರಕ್ಷತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂತಹ ಬೆದರಿಕೆಗಳಿಂದ ಜನರನ್ನು ರಕ್ಷಿಸಲು ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದನ್ನು ರಾಜ್ಯ ಗೃಹ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ʼವಿಶೇಷವಾಗಿ ಜೆನ್‌ ಝೀ ಸಮುದಾಯದಿಂದ ಹಿರಿಯ ಸಚಿವರ ಸೋಶಿಯಲ್‌ ಮೀಡಿಯಾದ ಖಾತೆಗಳನ್ನು ಸುರಕ್ಷಿತವಾಗಿರಲು ಸಾಧ್ಯವಾಗದಿದ್ದರೆ ಜನ ಸಾಮಾನ್ಯರ ಆನ್‌ಲೈನ್ ಸುರಕ್ಷತೆಯ ಬಗ್ಗೆ ಖಾತರಿ ಏನಿದೆ?ʼʼ ಎಂದು ಅವರು ಪ್ರಶ್ನಿಸಿದ್ದಾರೆ. ಕೇಂದ್ರೀಕೃತ ಡೇಟಾಬೇಸ್ ಅನ್ನು ರಚಿಸುವ ಗುರಿಯನ್ನು ಹೊಂದಿರುವ ಸರ್ಕಾರ ಇತ್ತೀಚೆಗೆ ತನ್ನ ‘ಗೋಲ್ಡನ್ ಡೇಟಾ’ ಯೋಜನೆಯನ್ನು ಘೋಷಿಸಿದೆ. ಆದಾಗ್ಯೂ, ಉಪಮುಖ್ಯಮಂತ್ರಿ ಖಾತೆಯನ್ನೇ ಹ್ಯಾಕ್‌ ಮಾಡಿರುವುದು ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಸೂಕ್ಷ್ಮ ಅಧಿಕೃತ ಡೇಟಾಗೆ ಭದ್ರತೆ ಒದಗಿಸುವ ಕ್ರಮದ ಬಗ್ಗೆ ಅನುಮಾನ ಹುಟ್ಟು ಹಾಕಿದೆʼʼ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!