ಉದಯವಾಹಿನಿ, ಇಂದೋರ್: ವ್ಯಕ್ತಿಯೊಬ್ಬ ಹಾವು ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣಿಕರಿಂದ ಹಣಕ್ಕಾಗಿ ಭಿಕ್ಷೆ ಬೇಡುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಹಮದಾಬಾದ್ ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ ಎಂದು ಹೇಳಲಾದ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ವಿಷಕಾರಿಯಲ್ಲದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಭಿಕ್ಷೆ ಬೇಡಿದ್ದಾನೆ. ಇದು ಪ್ರಯಾಣಿಕರಲ್ಲಿ ಭಯದ ವಾತಾವರಣ ಉಂಟು ಮಾಡಿತು. ಹೆದರಿದ ಪ್ರಯಾಣಿಕರು ಆತನಿಗೆ ಬೇಗ ಬೇಗೆ ಹಣವನ್ನು ಕೊಟ್ಟಿದ್ದಾರೆ.
ಮಧ್ಯಪ್ರದೇಶದ ಮುಂಗೋಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಷ್ಟಪಟ್ಟು ದುಡಿಯುವ ಬದಲು ಹಾವು ಹಿಡಿದುಕೊಂಡು ಬಂದು ಹಣ ಪಡೆಯುವ ಹೊಸ ವಿಧಾನ ಎಂದು ಎಕ್ಸ್ ಬಳಕೆದಾರರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ತ್ವರಿತವಾಗಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಯಿತು.
ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ವರ್ತನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಖಂಡಿಸಿದ್ದಾರೆ. ಕೆಲವರು ರೈಲಿನಲ್ಲಿ ಕಿರುಕುಳದ ಇದೇ ರೀತಿಯ ಕಥೆಗಳನ್ನು ಹಂಚಿಕೊಂಡರು. ಇತರರು ಅಂತಹ ನಡವಳಿಕೆಯ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಇದು ಮನರಂಜನೆಯಲ್ಲ, ಇದು ದುರ್ಬಲ ಜನರಿಂದ ಸುಲಿಗೆ ಮಾಡುವ ಹೊಸ ವಿಧಾನ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
