ಉದಯವಾಹಿನಿ,ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾನುವಾರು ಮಾರುಕಟ್ಟೆಗಳಲ್ಲಿ ಹಾವೇರಿ ಜಾನುವಾರು ಮಾರುಕಟ್ಟೆ ಸಹ ಒಂದು. ಇಲ್ಲಿ ರಾಜ್ಯ ಸೇರಿದಂತೆ ಆಂಧ್ರಪ್ರದೇಶ ತೆಲಂಗಾಣ ಮತ್ತು ತಮಿಳುನಾಡಿನಿಂದ ಎತ್ತುಗಳ ಮಾರಾಟಕ್ಕೆ ರೈತರು ಆಗಮಿಸುತ್ತಾರೆ. ಪ್ರತಿ ವರ್ಷ ಜೂನ್, ಜುಲೈ ತಿಂಗಳು ಬಂದರೆ ಸಾಕು ಹಾವೇರಿ ಜಾನುವಾರು ಮಾರುಕಟ್ಟೆ ದನಗಳಿಂದ ತುಂಬಿರುತ್ತಿತ್ತು. ಆದರೆ ಪ್ರಸ್ತುತ ವರ್ಷ ಹಾವೇರಿ ಜಾನುವಾರು ಮಾರುಕಟ್ಟೆ ದನಗಳ ಕೊರತೆ ಎದುರಿಸುತ್ತಿದೆ. ಜಿಲ್ಲೆಗೆ ಮುಂಗಾರು ಮಳೆ ಆಗದೆ ಇರುವದು ರೈತನನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಒಂದು ಕಡೆ ಬಿತ್ತನೆ ಮಾಡಬೇಕಿದ್ದ ರೈತ ಸಮರ್ಪಕ ಮಳೆಯಾಗದೆ ಇರುವ ಕಾರಣ ಬಿತ್ತನೆ ಮಾಡಿಲ್ಲ.
ಹಣ ನೀಡಿ ತಂದ ಬಿತ್ತನೆ ಬೀಜ ಮತ್ತು ಗೊಬ್ಬರ ರೈತರ ಮನೆಯಲ್ಲಿದೆ. ಇದ್ದ ಹಣವನ್ನೆಲ್ಲಾ ಬಿತ್ತನೆ ಬೀಜ ಗೊಬ್ಬರಕ್ಕೆ ರೈತ ಖರ್ಚು ಮಾಡಿದ್ದಾನೆ. ಎತ್ತು ಆಕಳುಗಳಿಗೆ ಸಮರ್ಪಕ ಒಣ ಮೇವಿಲ್ಲ. ಮಳೆಯಾಗದ ಕಾರಣ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಅಂತರ್ಜಲ ಸಹ ದಿನದಿಂದ ದಿನಕ್ಕೆ ಪಾತಾಳಕ್ಕೆ ಇಳಿಯುತ್ತಿದೆ. ಇತ್ತ ಜಾನುವಾರುಗಳನ್ನು ಮಾರಾಟಕ್ಕೆ ತಂದರೆ ಅದನ್ನ ಕೊಳ್ಳಲು ಸಹ ರೈತರಿಲ್ಲ. ರೈತರಗಿಂತ ಅಧಿಕ ಸಂಖ್ಯೆಯಲ್ಲಿ ದಲ್ಲಾಳಿಗಳಿದ್ದು ಬಾಯಿಗೆ ಬಂದ ದರ ಕೇಳುತ್ತಿದ್ದಾರೆ.
