ಉದಯವಾಹಿನಿ,ಬೆಂಗಳೂರು: ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯ ನಡುವೆಯೂ ತೀರಾ ಅಪರೂಪ ಎಂಬಂತೆ ಟೀಮ್ ಇಂಡಿಯಾಗೆ ಒಂದು ತಿಂಗಳ ವಿಶ್ರಾಂತಿ ಲಭ್ಯವಾಗಿದೆ. ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಬಳಿಕ ಭಾರತ ತಂಡಕ್ಕೆ ಸುದೀರ್ಘ ಅವಧಿಯ ವಿಶ್ರಾಂತಿ ಲಭ್ಯವಾಗಿದೆ. ಜುಲೈನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಎಲ್ಲಾ ಮಾದರಿಯ ಕ್ರಿಕೆಟ್ ಸರಣಿಗಳಲ್ಲಿ ಆತಿಥೇಯರ ಸವಾಲು ಎದುರಿಸಲಿದೆ. ಜುಲೈ 12ರಂದು 2 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಈ ಸರಣಿ ಮೂಲಕ 3ನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ.
ಬಳಿಕ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಯಲಿದ್ದು, ಈ ಸರಣಿಯೊಂದಿಗೆ ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅಂತಿಮ ತಯಾರಿಯನ್ನು ಟೀಮ್ ಇಂಡಿಯಾ ಆರಂಭಿಸಲಿದೆ. ಈ ಸಲುವಾಗಿ ಬಿಸಿಸಿಐ ಈಗಾಗಗಲೇ ರೋಹಿತ್ ಶರ್ಮಾ ಸಾರಥ್ಯದ ತಂಡಗಳನ್ನು ಪ್ರಕಟ ಮಾಡಿದ್ದು, ಒಡಿಐ ತಂಡದಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಸ್ಥಾನ ಪಡೆದುಕೊಂಡಿದ್ದಾರೆ. ಗಾಯಾಳುಗಳಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಸ್ಯಾಮ್ಸನ್‌ಗೆ ಅವಕಾಶ ಲಭ್ಯವಾಗಿದೆ.
