ಉದಯವಾಹಿನಿ, ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್‌ನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ನಿರ್ಮಾಣದಲ್ಲಿ ಎರಡನೇ ಪ್ರಯತ್ನವಾಗಿ ಸಿದ್ಧವಾಗುತ್ತಿರುವ ಚಿತ್ರ ‘ಮೋಡ, ಮಳೆ ಮತ್ತು ಶೈಲ’. ವಿಭಿನ್ನ ಪ್ರಯತ್ನದ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕಾಗಿ ಒಂದಾಗಿದ್ದ ನಿರ್ದೇಶಕ ರಕ್ಷಿತ ತೀರ್ಥಹಳ್ಳಿ ಹಾಗೂ ನಿರ್ಮಾಪಕ ಆದರ್ಶ ಅಯ್ಯಂಗಾರ್ ಇದೀಗ ಮತ್ತೆ ಒಂದಾಗಿ ‘ಮೋಡ, ಮಳೆ ಮತ್ತು ಶೈಲ’ ಚಿತ್ರ ತಯಾರಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ, ಉತ್ಪಲ್ ಗೌಡ, ರಾಘು ರಾಮನಕೊಪ್ಪ, ಬಲರಾಜ್ ವಾಡಿ, ಅಶ್ವಿನ್ ಹಾಸನ ಪ್ರಮುಖ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಪಿಆರ್‌ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಬರಹಗಾರ ಮತ್ತು ನಿರ್ದೇಶಕ ರಕ್ಷಿತ ತೀರ್ಥಹಳ್ಳಿ, ‘ಸದ್ಯ ನಮ್ಮ ಚಿತ್ರದ ಶೂಟಿಂಗ್ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಆದರ್ಶ ಅಯ್ಯಂಗಾರ್ ಅವರಿಗೆ ಕಥೆ ಹೇಳಿದಾಗ ಕಂಟೆಂಟ್ ಸ್ಟ್ರಾಂಗ್ ಆಗಿದೆ ಚಿತ್ರ ಮಾಡೋಣ ಎಂದರು. ಈ ಚಿತ್ರವನ್ನು ಸಂಪೂರ್ಣ ಮಳೆಯಲ್ಲಿಯೇ ಸಿಂಕ್ ಸೌಂಡ್ ನಲ್ಲಿ ಶೂಟ್ ಮಾಡಲಾಗಿದೆ. ಈ ಮೊದಲಿನ ಮೂರು ಚಿತ್ರಗಳನ್ನು ವಿಷಯಗಳ ಮೇಲೆ ಮಾಡಿದ್ದೆ. ಈಗ ಶೈಲ ಕಥೆ ಹೇಳಲು ಹೊರಟಿದ್ದೇನೆ. ಕಲಾವಿದರು ಚೆನ್ನಾಗಿ ನಟಿಸಿದ್ದು, ಇದು ಕಲಾವಿದರ ಸಿನಿಮಾ ಎನ್ನಬಹುದು. ಡ್ರಾಮಾ ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದೆ. ತೀರ್ಥಹಳ್ಳಿ, ಕುಂದಾಪುರ ಗಡಿಭಾಗಗಳ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ನಾನು 2012-13ರ ಕಾಲಘಟ್ಟದಲ್ಲಿ ನೋಡಿದ ಹಾಗೂ ಕೇಳಿದ ಒಂದಿಷ್ಟು ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!